ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯನಾಗಿದ್ದ, ದಕ್ಷಿಣ ಕನ್ನಡದ ಸೂಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು 20 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರವೀಣ್ ನೆಟ್ಟಾರು ಅವರನ್ನು ಕೊಂದಿದ್ದು ಪಿಎಫ್ಐ (ಈಗ ನಿಷೇಧಿತ ಸಂಘಟನೆ) ಸದಸ್ಯರೇ ಎಂಬುದು ಸಾಬೀತಾಗಿದೆ. 2022ರ ಜುಲೈ 26ರಂದು ನಡೆದಿದ್ದ ಈ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಐಎ ಈಗಾಗಲೇ 15 ಆರೋಪಿಗಳನ್ನು ವಶಕ್ಕೆ ಪಡೆದಿದೆ. ಇನ್ನಿಬ್ಬರು ಪ್ರಮುಖ ಆರೋಪಿಗಳಾದ, ಪಿಎಫ್ಐ ಮುಖಂಡರಾದ ಕೊಡಾಜೆ ಮಹಮ್ಮದ್ ಷರೀಫ್ ಹಾಗೂ ನೆಕ್ಕಿಲಾಡಿ ಮಸೂದ್‌ಗಾಗಿ ತನಿಖಾ ದಳ ಹುಡುಕಾಟ ನಡೆಸುತ್ತಿದ್ದು, ಇವರಿಬ್ಬರ ಸುಳಿವಿಗಾಗಿ ತಲಾ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಈ ಮಧ್ಯೆ ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸುಮಾರು 1500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿರುವ ಎನ್ಐಎ, ‘ಸಮಾಜದಲ್ಲಿ-ಜನರಲ್ಲಿ ಭಯ ಹುಟ್ಟಿಸುವ ಸಲುವಾಗಿ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್ಐ ಹತ್ಯೆ ಮಾಡಿದೆ. ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿ ಸೃಷ್ಟಿಸುವುದು ಆ ಸಂಘಟನೆ ಮುಖಂಡರ ಪ್ರಮುಖ ಉದ್ದೇಶ. 2047ರ ಹೊತ್ತಿಗೆ ಇಸ್ಲಾಮಿಕ್ ಆಳ್ವಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಪಿಎಫ್ಐ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ವಿವಿಧ ಹಿಂದು ಮುಖಂಡರ ಹತ್ಯೆಗಳನ್ನು ನಡೆಸಲು ಸೇವಾ ತಂಡಗಳು, ಕಿಲ್ಲರ್ ಸ್ಕ್ವಾಡ್ಗಳು ಎಂಬ ರಹಸ್ಯ ತಂಡಗಳನ್ನು ಪಿಎಫ್ಐ ರಚನೆ ಮಾಡಿಕೊಂಡಿತ್ತು. ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ, ಆತನನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದರು. ಅದಕ್ಕಾಗಿ ಸದಸ್ಯರಿಗೆ ತರಬೇತಿ ನೀಡುತ್ತಿದ್ದರು. ಬಳಿಕ ಆಯಾ ಜಿಲ್ಲಾ ಮುಖ್ಯಸ್ಥನಿಗೆ ಸೂಚನೆ ನೀಡುತ್ತಿದ್ದರು. ಹೀಗೆ ಟಾರ್ಗೆಟ್ ಆದ ವ್ಯಕ್ತಿಗಳಲ್ಲಿ ಪ್ರವೀಣ್ ನೆಟ್ಟಾರು ಕೂಡ ಒಬ್ಬನಾಗಿದ್ದ’ ಎಂಬ ಅಂಶಗಳನ್ನು ಎನ್ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಮಹಮ್ಮದ್ ಶಿಯಾಬ್, ಅಬ್ದುಲ್ ಬಶೀರ, ರಿಯಾಝ್, ಮುಸ್ತಫಾ ಪೈಚಾರ್, ಮಸೂದ್ ಕೆ ಎ, ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕ್, ನೌಫಲ್ ಎಂ., ಇಸ್ಮಾಯಿಲ್ ಶಾಫಿ.ಕೆ., ಕೆ ಮಹಮ್ಮದ್ ಇಕ್ಬಾಲ್, ಶಹೀದ್ ಎಂ., ಮಹಮ್ಮದ್ ಶಫೀಕ್ ಜಿ., ಉಮ್ಮರ್ ಫಾರೂಕ್ ಎಂ.ಆರ್., ಅಬ್ದುಲ್ ಕಬೀರ್ ಸಿ.ಎ., ಮುಹಮ್ಮದ್ ಇಬ್ರಾಹಿಂ ಶಾ., ಸೈನುಲ್ ಅಬಿದ್ ವೈ., ಶೇಖ್ ಸದ್ದಾಂ ಹುಸೇನ್., ಜಾಕಿಯಾರ್ ಎ., ಎನ್.ಅಬ್ದುಲ್ ಹಾರಿಸ್., ತುಫೈಲ್ ಎಂ. ಎಚ್. ಎಂಬುವರ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: Praveen Nettaru murder | ಪ್ರವೀಣ್ ನೆಟ್ಟಾರು ಕೊಲೆ: ತಲೆಮರೆಸಿಕೊಂಡಿರುವ ಇಬ್ಬರು ಪಿಎಫ್ಐ ನಾಯಕರಿಗಾಗಿ NIA ಶೋಧ