ವಿಜಯನಗರ: ಕುರುಬ ಸಮಾಜದಿಂದ ಎಸ್‌ಟಿ ಮೀಸಲಾತಿ ಹೋರಾಟ ಪಾದಯಾತ್ರೆ ನಡೆಸಿ ಎರಡು ವರ್ಷಗಳಾಗಿದೆ. ಕುಲಶಾಸ್ತ್ರ ಅಧ್ಯಯನ ವರದಿ ಸರ್ಕಾರದ ಬಳಿಯಿದೆ. ಎಸ್‌ಟಿ ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಫೆಬ್ರವರಿ 7ರ ಒಳಗಾಗಿ ಈ ಬಗ್ಗೆ (ST Status to Kurubas) ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.
ಜಿಲ್ಲೆಯ ಮೈಲಾರದಲ್ಲಿ ಶ್ರೀ ಏಳುಕೋಟಿ ವಸತಿ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಬಳಿಕ ಸಚಿವ ಆರ್. ಅಶೋಕ ಅವರಿಗೆ ಮನವಿ ಪತ್ರ ನೀಡಿದ್ದೆವು. ಸರ್ಕಾರಕ್ಕೆ ಮುಜಗರ ತರದಂತೆ ಮನವಿ ಸಲ್ಲಿಸಿ ಎರಡು ವರ್ಷ ಕಳೆದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲು ಶಿಫಾರಸು ಮಾಡುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಹೇಳಿದರು.
ಏಳು ಕೋಟಿ ವಸತಿ ಶಾಲೆ ಲೋಕಾರ್ಪಣೆ ಮಾಡಿದ್ದು ಖುಷಿ ತಂದಿದೆ. ಈಗಿನ ಸಿಎಂ ನಮ್ಮ ಮಠದ ಒಡನಾಡಿಗಳು. ಈ ಹಿಂದಿನ ಸಿಎಂ ಯಡಿಯೂರಪ್ಪ ಅವರು ಹತ್ತು ಕೋಟಿ ಬಿಡುಗಡೆ ಮಾಡಿದ್ದರು. ನಮ್ಮ ಮಠದಲ್ಲಿ ಪ್ರಸಾದ ಸ್ವೀಕಾರ ಮಾಡಿದ ಏಕೈಕ ಸಿಎಂ ಬಿಎಸ್ ಯಡಿಯೂರಪ್ಪನವರಾಗಿದ್ದಾರೆ ಎಂದು ತಿಳಿಸಿದರು.
ಸಮುದಾಯ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿ
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಒಂದೂವರೆ ವರ್ಷದಲ್ಲಿ ವಸತಿ ಶಾಲೆ ಕಟ್ಟಿದ್ದಕ್ಕೆ ಸ್ವಾಮೀಜಿಗೆ ಅಭಿನಂದನೆ ಸಲ್ಲಿಸುವೆ. ಶ್ರೀ ಕ್ಷೇತ್ರ ಮೈಲಾರದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾ ಮಠದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ 5 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕುರುಬ ಸಮುದಾಯಕ್ಕೆ ಸಹಾಯಹಸ್ತ ಚಾಚಲು ಸರ್ಕಾರ ಕುರಿಗಾಹಿಗಳ ಮನೆ ಕಂ ಶೆಡ್ ನಿರ್ಮಾಣದ ಕಾರ್ಯಕ್ರಮವನ್ನು ರೂಪಿಸಲಾಗಿದೆ. 354 ಕೋಟಿ ರೂ. ವೆಚ್ಚದಲ್ಲಿ 20 ಸಾವಿರ ಕುರಿಗಾಹಿ ಸಂಘಗಳ ಮೂಲಕ ಕುರಿಗಾಹಿಗಳಿಗೆ 20 ಕುರಿ ಮತ್ತು ಒಂದು ಮೇಕೆಯನ್ನು ನೀಡುವ ಯೋಜನೆಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ | kodi mutt swamiji: ಪಕ್ಷಗಳು ಒಡೆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠ ಶ್ರೀ ಭವಿಷ್ಯ
ಕಾಗಿನೆಲೆ ಹಾಗೂ ಬಾಡ ಕ್ಷೇತ್ರದ ಅಭಿವೃದ್ಧಿ
ಭಕ್ತ ಕನಕದಾಸರ ಜನ್ಮ ಭೂಮಿಯಿಂದ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಕಾಗಿನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ 40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಬಾಡ ಕ್ಷೇತ್ರದಲ್ಲಿ ಕನಕನ ಅರಮನೆ, ಕೋಟೆಯನ್ನು ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತಿ, ಮತ, ಭೇದವಿಲ್ಲದೇ ಜನಸಮುದಾಯಕ್ಕೆ ಒಳಿತಾಗುವಂತಹ ಕಾರ್ಯಕ್ರಮಗಳು, ವಿಶೇಷವಾಗಿ ಮಠಗಳ ಮೂಲಕ ಸಮುದಾಯ ಅಭಿವೃದ್ಧಿಗೊಳಿಸುವ ಕಲ್ಪನೆಯನ್ನು ಸಾಧ್ಯವಾಗಿಸಿದ್ದಾರೆ. ಕನಕ ಜಯಂತಿ, ವಾಲ್ಮೀಕಿ ಜಯಂತಿಯನ್ನು ಘೋಷಣೆ ಮಾಡಿ ಸಂತರ ವಿಚಾರಧಾರೆಗಳನ್ನು ಪ್ರಚುರಪಡಿಸುವ ಕೆಲಸವನ್ನು ಮಾಡಿದ್ದಾರೆ ಎಂದರು.
ಕುರುವ ಸಮಾಜಕ್ಕೆ ನ್ಯಾಯ ಒದಗಿಸುತ್ತೇವೆ
ಎಸ್ ಟಿ ಮೀಸಲಾತಿ ವಿಚಾರ ಪ್ರತಿಕ್ರಿಯಿಸಿದ ಸಿಎಂ, ಸ್ವಾಮೀಜಿಯವರು ಪಾದಯಾತ್ರೆ ಮಾಡಿದ್ದಾರೆ. ಕುಲಶಾಸ್ತ್ರ ಅಧ್ಯಯನ ಅಂತಿಮ ಹಂತದಲ್ಲಿದೆ. ವರದಿ ಆದಷ್ಟು ಬೇಗ ನನ್ನ ಕೈಸೇರಲಿದೆ. ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇವೆ. ಸರಿಯಾದ ರೀತಿಯಲ್ಲಿ ಕಳುಹಿಸದ ಹಿನ್ನೆಲೆಯಲ್ಲಿ ಈ ಹಿಂದೆ ಕಳುಹಿಸಿದ್ದ ವರದಿ ಮರಳಿ ಬಂದಿದೆ. ಮತ್ತೆ ಹೀಗೆ ಆಗಬಾರದೆಂದು ಬಹಳ ಕಾಳಜಿ ವಹಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ್, ಸಿಸಿ ಪಾಟೀಲ್, ಎಂಟಿಬಿ ನಾಗರಾಜ್ , ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತಿತರರು ಭಾಗಿಯಾಗಿದ್ದರು.