ಬೆಂಗಳೂರು: ದೇಶವನ್ನು ಆಳುವವರು ಮೊದಲು ಇಲ್ಲಿನ ಮೂಲ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಕೆಂಪೇಗೌಡರು ಈ ನೆಲದ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು, ರೂಢಿಸಿಕೊಂಡಿದ್ದರು. ಅವರ ಹಾದಿಯಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಗುತ್ತಿದ್ದಾರೆ. ಈ ನೆಲದ ಸಂಸ್ಕೃತಿ, ಅಧ್ಯಾತ್ಮವನ್ನು ಅರಿತು, ದೇಶವನ್ನು ಆಳುತ್ತಿದ್ದಾರೆ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾದ, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ (ಪ್ರಗತಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಬಳಿಕ ಹಮ್ಮಿಕೊಳ್ಳಲಾಗಿದ್ದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
2020ರ ಜೂನ್ನಲ್ಲಿ ಕೊರೊನಾ ತುತ್ತತುದಿಯಲ್ಲಿ ಇತ್ತು. ಆ ವರ್ಷ ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜನ್ಮಜಯಂತಿಯಂದು ಬಿ.ಎಸ್.ಯಡಿಯೂರಪ್ಪನವರು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಆಗ ಕೊರೊನಾ ಸಾಂಕ್ರಾಮಿಕ ಕಾರಣದಿಂದ ಜಗತ್ತಿನ ದೇಶಗಳ ಪ್ರಗತಿ ನಿಂತಿತ್ತು. ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆದರೆ ಕೆಂಪೇಗೌಡರ ಪ್ರಗತಿ ಪ್ರತಿಮೆಯ ನಿರ್ಮಾಣದ ಕೆಲಸಕ್ಕೆ ಅಡ್ಡಿಯಾಗಲಿಲ್ಲ. ಎರಡು ವರ್ಷಗಳ ನಂತರ ಪ್ರಗತಿ ಪ್ರತಿಮೆ ಉದ್ಘಾಟನೆಗೊಂಡಿದೆ. ವಿಗ್ರಹ ಲೋಕಾರ್ಪಣೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಸ್ತೆ ಕನ್ನಡ ನಾಡಿನ ಜನರ ಪರವಾಗಿ ಧನ್ಯವಾದಗಳು ಎಂದು ಸ್ವಾಮೀಜಿ ಹೇಳಿದರು.
ಭಾರತ ಉಳಿದರೆ ಎಲ್ಲರೂ ಉಳಿಯುತ್ತಾರೆ, ಭಾರತ ಅಳಿದರೆ ಎಲ್ಲರೂ ಅಳಿಯುತ್ತಾರೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಜ್ಞಾನ ದೃಷ್ಟಿಯಿಂದ ಅವರು ಈ ಮಾತುಗಳನ್ನಾಡಿದ್ದರು. ಅಂದಿನಿಂದಲೂ ಹಲವು ನಾಯಕರು ಇದೇ ಮಾತಿಗೆ ಬದ್ಧರಾಗಿದ್ದಾರೆ. ಕೆಂಪೇಗೌಡರು ನಾಡಪ್ರಭುಗಳಷ್ಟೇ ಅಲ್ಲ, ಅವರು ಧರ್ಮಪ್ರಭು ಕೂಡ ಆಗಿದ್ದರು. ಅಂಥ ಧರ್ಮಪ್ರಭು 500 ವರ್ಷಗಳ ಹಿಂದೆ ಕಟ್ಟಿದ ಬೆಂಗಳೂರು ಇದು. ಯಾವುದೇ ಒಂದು ದೇಶಕ್ಕೆ ಅತ್ಯಮೂಲ್ಯ ಸಂಪತ್ತು ಅಂದರೆ ಅಲ್ಲಿನ ಮಾನವ ಸಂಪನ್ಮೂಲ. ಈ ಮಾನವ ಸಂಪೂಲ್ಮನವನ್ನು ಸಮರ್ಪಕವಾಗಿ, ಸಕಾರಾತ್ಮಕವಾಗಿ ಬಳಸಿಕೊಳ್ಳುವ ದೇಶ ಖಂಡಿತವಾಗಿಯೂ ಅಭ್ಯುದಯ-ಪ್ರಗತಿಯತ್ತ ಸಾಗುತ್ತದೆ ಎಂಬುದು ಕೆಂಪೇಗೌಡರ ನಂಬಿಕೆಯಾಗಿತ್ತು. ಈಗ 500ವರ್ಷಗಳ ಬಳಿಕ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರೂ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಕೌಶಲದ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಕೌಶಲ, ಮರುಕೌಶಲ ಮತ್ತು ಉನ್ನತ ಕೌಶಲ ಎಂಬ ಮೂರು ಪರಿಕಲ್ಪನೆಗಳ ಮೂಲಕ, ಇಲ್ಲಿನ ಮಾನವಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಎಲ್ಲ ಸಮುದಾಯಗಳನ್ನೂ ಒಟ್ಟಾಗಿಸಿಕೊಂಡು ಸಾಗುತ್ತಿದ್ದಾರೆ ಎಂದು ಹೇಳಿದರು.
ಒಂದು ಕಾಲದಲ್ಲಿ ವಿಶ್ವದ ಹಲವು ದೇಶಗಳು, ನಮ್ಮನ್ನು ಕೇಳಿ ನೀವು ಆಡಳಿತ ಮಾಡಿ ಎಂದು ಭಾರತಕ್ಕೆ ಹೇಳುತ್ತಿದ್ದವು. ಆದರೆ ಈಗ ಹಾಗಿಲ್ಲ, ಆ ದೇಶಗಳಿಗೆ ಸಮಸ್ಯೆ ಬಂದರೆ, ಅವು ಭಾರತಕ್ಕೆ ಕರೆ ಮಾಡಿ, ಸಲಹೆ- ಸಹಾಯ ಕೇಳುತ್ತಿವೆ. ಯಾರಿಗೆ ಜ್ಞಾನವಿದೆಯೋ ಅವರು ದೇಶವನ್ನು ಆಳಬೇಕು ಎಂದು ಪ್ಲೇಟೋ ಹೇಳಿದ್ದ. ಆದರೆ ನರೇಂದ್ರ ಮೋದಿ, ಕೆಂಪೇಗೌಡರು ಜ್ಞಾನದ ಜತೆಗೆ ಕರ್ಮಜ್ಞಾನವೂ ಇರಬೇಕು ಎಂದು ತೋರಿಸಿಕೊಟ್ಟರು. ಕರ್ಮ ಮತ್ತು ಜ್ಞಾನ ಸಮ್ಮಿಳಿತವಾದಾಗಲೇ ದೇಶ ಉದ್ಧಾರವಾಗುತ್ತದೆ ಎಂಬುದನ್ನು ಕೆಂಪೇಗೌಡರು ಮತ್ತು ನರೇಂದ್ರ ಮೋದಿ ಇಬ್ಬರೂ ಸಾಬೀತು ಮಾಡಿದ್ದಾರೆ ಎಂದು ಹೇಳಿದ ನಿರ್ಮಲಾನಂದನಾಥ ಸ್ವಾಮೀಜಿ, ಕರೋನಾದಿಂದ ಹಲವು ದೇಶಗಳ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ. ಹಾಗಿದ್ದಾಗ್ಯೂ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇಷ್ಟು ಸುಭದ್ರವಾಗಿರಲು ಕೆಂಪೇಗೌಡರು ನಾಡು ಕಟ್ಟುವಾಗ ಹಾಕಿಕೊಟ್ಟ ನಿಯಮಗಳು ಮತ್ತು ಈಗಲೂ ಅದನ್ನು ಅನುಸರಿಸಿಕೊಂಡು ಬರುತ್ತಿರುವುದೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Modi in Bengaluru | ಕುಲ ಕುಲವೆಂದು ಹೊಡೆದಾಡದಿರಿ; ಕನಕದಾಸರ ರಾಮಧಾನ್ಯ ಚರಿತೆಯನ್ನೂ ಸ್ಮರಿಸಿದ ಮೋದಿ!