Site icon Vistara News

VTU Convocation : ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ವಿಟಿಯು ಗೌರವ ಡಾಕ್ಟರೇಟ್‌ ಪ್ರದಾನ

VTU convocation HS Shetty and AVS Murthy

ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವ ಸಮಾರಂಭ ವಿಟಿಯುನ ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ನಡೆಯಿತು. ಈ ವೇಳೆ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಡಾ. ಎ.ವಿ.ಎಸ್ ಮೂರ್ತಿ (AVS Murthy) ಹಾಗೂ ಮೈಸೂರು ಮರ್ಕಂಟೈಲ್‌ ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎಸ್. ಶೆಟ್ಟಿ (HS Shetty) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮದ್ರಾಸ್ ಐಐಟಿಎಂನ ನಿರ್ದೇಶಕ ಪ್ರೊ. ವಿ. ಕಾಮಕೋಟಿ ವಿವಿ ಕುಲಪತಿ ಪ್ರೊ. ಎನ್. ವಿದ್ಯಾಶಂಕರ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ‌ಈ ವೇಳೆ ಪ್ರಸಕ್ತ ವರ್ಷದಲ್ಲಿ ವಿವಿಯ ಬಿಇ-ಬಿಟೆಕ್ ವಿಭಾಗದ 42,545, ಹಾಗೂ ಬಿಇ ಆರ್ಕಿಟೆಕ್ ವಿಭಾಗದ 1003 ಮತ್ತು 556 ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅವರಿಗೂ ಗೌರವ ಡಾಕ್ಟರೇಟ್‌ ಅನ್ನು ಪ್ರಕಟಿಸಲಾಗಿತ್ತು. ಆದರೆ, ಅವರು ಕಾರಣಾಂತರಗಳಿಂದ ಆಗಮಿಸಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ತೆರಳಿ ಅವರಿಗೆ ಪ್ರದಾನ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Gruha Jyothi Scheme : 1.43 ಕೋಟಿ ಜನರಿಗೆ ಮಾತ್ರ ಈ ಬಾರಿ ಫ್ರೀ ವಿದ್ಯುತ್;‌ ಉಳಿದವರಿಗಿಲ್ಲ!

ಚಿನ್ನದ ಪದಕ ವಿಜೇತರಿವರು

ಬೆಂಗಳೂರು ಸರ್ ಎಂ ವಿಐಟಿ ಸಿವಿಲ್ ವಿಭಾಗದ ಮದಕಶಿರಾ ವಿಕಾಸ್ 13 ಚಿನ್ನದ ಪದಕ, ಬೆಂಗಳೂರು ಬಿಐಟಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಜಿ, ಅಭಿಷೇಕ 7 ಚಿನ್ನದ ಪದಕ ಹಾಗೂ ಬೆಂಗಳೂರು ಎಸ್ ಎಂ ವಿಐಟಿ ಕಾಲೇಜು ಇ ಆ್ಯಂಡ್ ಸಿ ವಿಭಾಗದ ಗುಡಿಕಲ್‌ ಸಾಯಿ ವಂಶಿ 7 ಚಿನ್ನದ ಪದಕ, ಬಳ್ಳಾರಿಯ ಐಟಿಎಂ ಕಾಲೇಜಿನ ಇ‌ ಆ್ಯಂಡ್‌ ಇ ವಿಭಾಗದ ಕೆ‌.ಆರ್. ಸಂಪತ್‌ ಕುಮಾರ್ 7 ಚಿನ್ನದ ಪದಕ ಪಡೆದು ಸಂಭ್ರಮಿಸಿದರು.‌ ಪ್ರಸಕ್ತ ಸಾಲಿನಲ್ಲಿ 44104 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.

ವಿಟಿಯು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿರುವ ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಮತ್ತು ಮಾಜಿ ಶಾಸಕ ರಘುಪತಿ ಭಟ್‌ ಮತ್ತಿತರ ಗಣ್ಯರು.

ಉದ್ಯೋಗ, ಸಂಪತ್ತು ಸೃಷ್ಟಿಸಿ ಜಗತ್ತಿನ ಆರ್ಥಿಕ ಶಕ್ತಿಯಾಗಿಸಿ – ಪ್ರೊ.ವಿ.ಕಾಮಕೋಟಿ

ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿ‌ ಪದವೀಧರರೇ ದೇಶದ ಬೌದ್ಧಿಕ ಆಸ್ತಿಯ ಪಾಲುದಾರರಾಗಿದ್ದಾರೆ. ಪದವಿ ಬಳಿಕ ಉದ್ಯೋಗ ಅರಸದೇ, ದೇಶದಲ್ಲಿ ಉದ್ಯೋಗ ಸೃಷ್ಟಿಸಿ ಸಂಪತ್ತಿನ ಸೃಷ್ಟಿಕರ್ತರಾಗಿ‌ ಭಾರತವು ಜಗತ್ತಿನ‌ ಆರ್ಥಿಕ ಶಕ್ತಿಯಾಗಿ ಬೆಳೆಯಲು ಕೊಡುಗೆ ನೀಡಬೇಕು ಎಂದು ಚೆನ್ನೈ ಐಐಟಿಎಂ ನಿರ್ದೇಶಕ ಪ್ರೊ.ವಿ.ಕಾಮಕೋಟಿ ಹೇಳಿದರು.

ಭಾರತವು 108ಕ್ಕೂ ಹೆಚ್ಚು ಯೂನಿಕಾರ್ನ್‌ಗಳ ನೆಲೆಯಾಗಿದ್ದು, ಪದವೀಧರರು ಉದ್ಯೋಗ ಮತ್ತು ಸಂಪತ್ತು ಸೃಷ್ಟಿಸಬೇಕು. ದೇಶದಲ್ಲಿ ಯಾರೊಬ್ಬರೂ ಶಾಲಾ ಶಿಕ್ಷಣದಿಂದ ಹೊರಗುಳಿಯದಂತೆ ಪ್ರೇರೇಪಿಸಬೇಕು. ವಿಶ್ವ ಆರ್ಥಿಕ ಶಕ್ತಿಯಾಗಿ ಪ್ರಗತಿ ಸಾಧಿಸಲು ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಭಾರತದಲ್ಲಿ ಅಭೂತಪೂರ್ವ ಡಿಜಿಟಲ್ ಕ್ರಾಂತಿ: ಗೆಹ್ಲೋಟ್‌

ಸ್ವಾತಂತ್ರ್ಯ ಲಭಿಸಿ ಶತಮಾನದ ಸಂಭ್ರಮ ಬರುವ ಹೊತ್ತಿಗೆ ಭಾರತ ವಿಶ್ವಗುರುವಾಗಲಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿವೆ. ಭಾರತ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ವಿಶ್ವಗುರುವಾಗಲಿದೆ. ಪ್ರಪಂಚದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿರಲಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅಭಿಪ್ರಾಯಪಟ್ಟರು.

ಡಿಜಿಟಲ್‌ ಇಂಡಿಯಾ ಕನಸು ಸಾಕಾರಗೊಳ್ಳಲು ಶ್ರಮಿಸೋಣ, ಡಿಜಿಟಲ್‌ ಕ್ರಾಂತಿಯತ್ತ ಹೆಜ್ಜೆ ಇಡೋಣ. ಭಾರತದ ಆರ್ಥಿಕ ವ್ಯವಸ್ಥೆ ಸದ್ಯ ವಿಶ್ವಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ. ಅದನ್ನು 3ನೇ ಸ್ಥಾನಕ್ಕೇರಿಸಲು ಎಲ್ಲರೂ ಪ್ರಯತ್ನಿಸೋಣ ಎಂದರು.

ಫೆಬ್ರವರಿಯಲ್ಲಿ ಪೂರಕ ಘಟಿಕೋತ್ಸವ

ಉನ್ನತ ವ್ಯಾಸಂಗ ಮುಂದುವರಿಸುವ ಹಾಗೂ ಎಂಜಿನಿಯರಿಂಗ್ ಪದವಿ ಮುಗಿಸಿದ ತಕ್ಷಣವೇ ಪ್ರತಿಷ್ಠಿತ ಕಂಪನಿಗಳಿಗೆ ನೇಮಕಗೊಂಡು ವೃತ್ತಿ ಬದುಕು ಆರಂಭಿಸುವವರ ಅನುಕೂಲಕ್ಕಾಗಿ ಪ್ರಸಕ್ತ ವರ್ಷದಿಂದ 8ನೇ ಸೆಮಿಸ್ಟರ್‌ನ ಫಲಿತಾಂಶವನ್ನು ಮೇ ತಿಂಗಳಿನಲ್ಲೇ ಪ್ರಕಟಿಸಲಾಗಿದೆ ಎಂದು ವಿಟಿಯು ಕುಲಪತಿ ಡಾ.ಎಸ್. ವಿದ್ಯಾಶಂಕರ ಹೇಳಿದರು.

ಅಗತ್ಯಬಿದ್ದರೆ ಪಿಜಿ ವಿದ್ಯಾರ್ಥಿಗಳ ಪದವಿ ಪ್ರದಾನ ಮಾಡಲು ಫೆಬ್ರವರಿ ತಿಂಗಳಲ್ಲಿ ಪೂರಕ ಘಟಿಕೋತ್ಸವವನ್ನು ನಡೆಸಲಾಗುವುದು. ಐಐಟಿ ಹಾಗೂ ಐಐಐಟಿಯಂಥ ಅಂತಾರಾಷ್ಟ್ರೀಯ ಸಂಸ್ಥೆ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವರ್ಷಾರಂಭಕ್ಕೆ ಪ್ರವೇಶಾತಿಗಾಗಿ ಅನಗತ್ಯವಾಗಿ ಒಂದು ವರ್ಷ ಕಾಯುವುದು ತಪ್ಪುವುದರ ಜತೆಗೆ ಪದವಿ ಪಡೆದ ವರ್ಷದಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗಲಿದೆ. ಹೀಗಾಗಿ ಪಿಜಿ ಕೋರ್ಸ್‌ಗಳ ಫಲಿತಾಂಶಕ್ಕೆ ಇದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವವರೆಗೂ ವಿಶ್ವವಿದ್ಯಾಲಯದಿಂದ ಪೂರಕ ಘಟಿಕೋತ್ಸವಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Karnataka politics : ಕೈ ಹೈಕಮಾಂಡ್‌ಗೆ ಸರ್ಕಾರದ ವರ್ಗಾವಣೆ ದಂಧೆ ರಿಪೋರ್ಟ್‌ ಕೊಟ್ಟ ಬಿ.ಕೆ. ಹರಿಪ್ರಸಾದ್!

ಇನ್ನು ಸಮಾರಂಭದಲ್ಲಿ ಅತಿಥಿಯಾಗಿ ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಹಾಗೂ ಜೀವಜಲ ಕಾರ್ಯಪಡೆ ಅಧ್ಯಕ್ಷ, ವಿಸ್ತಾರ ನ್ಯೂಸ್‌ ನಿರ್ದೇಶಕ ಶ್ರೀನಿವಾಸ ಹೆಬ್ಬಾರ್ ಭಾಗವಹಿಸಿದ್ದರು.

Exit mobile version