Site icon Vistara News

Nirman-2023 Exhibition | ಕಟ್ಟಡ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭರ್ಜರಿ ಸ್ಪಂದನೆ

Nirman 2023

ಬಳ್ಳಾರಿ: ಬಳ್ಳಾರಿಯ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್‌ನವರು ವಿಸ್ತಾರ ನ್ಯೂಸ್ ಮೀಡಿಯಾ ಸಹಯೋಗದಲ್ಲಿ ಏರ್ಪಡಿಸಿರುವ ನಿರ್ಮಾಣ್- ೨೦೨೩ (Nirman-2023 Exhibition) ವಿಶೇಷ ವಸ್ತು ಪ್ರದರ್ಶನಕ್ಕೆ ಭರ್ಜರಿ ಜನಸ್ಪಂದನೆ ಸಿಕ್ಕಿದೆ.

ಎಸಿಸಿ ಹಾಗೂ ಕಜಾರಿಯ-ಮಹದೇವ್ ಗ್ರಾನೈಟ್ಸ್ ಸಹಯೋಗವೂ ಇರುವ ಈ ವಸ್ತು ಪ್ರದರ್ಶನ ಜ. ೬ರಂದು ಆರಂಭಗೊಂಡಿದ್ದು ಜನವರಿ ೮ರವರೆಗೆ ನಡೆಯಲಿದೆ. ಬಳ್ಳಾರಿ ಕೋರ್ಟ್ ರಸ್ತೆಯ ಕಮ್ಮಾಭವನದಲ್ಲಿ ಏರ್ಪಡಿಸಿರುವ ನಿರ್ಮಾಣ್-೨೦೨೩ ಇದು ವಿನೂತನ ಬಗೆಯ ಕಟ್ಟಡ ಸಾಮಗ್ರಿಗಳು, ಕಟ್ಟಡ ನಿರ್ಮಿಸಲು ಬೇಕಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವಾಗಿದೆ.

ಅಸೋಸಿಯೇಷನ್ ಉತ್ತಮ ಕಾರ್ಯ
ಬಳ್ಳಾರಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಅವರು ಶುಕ್ರವಾರ ಬೆಳಗ್ಗೆ ಮೇಳಕ್ಕೆ ಚಾಲನೆ ನೀಡಿದರು. ʻʻಅಸೋಸಿಯೇಷನ್ ಉತ್ತಮ ಕಾರ್ಯ ಮಾಡಿದೆ, ಮನೆ ಕಟ್ಟುವ ಜನರಿಗೆ ಇದು ಅನುಕೂಲಕಾರಿಯಾಗಿದೆ. ಹೊಸ ಸಾಮಗ್ರಿಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಹಕರಿಗೆ ಮತ್ತು ಕಂಪನಿಗಳಿಗೆ, ಮಾರಾಟಗಾರರಿಗೆ ಕೊಂಡಿಯಾಗಿ ಅಸೋಸಿಯೇಷನ್ ಕೆಲಸ ಮಾಡುತ್ತಿರುವುದು ಶ್ಲಾಘನೀಯʼʼ ಎಂದರು. ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್‌ನ ಯಶವಂತ, ಚೇಂಬರ್ಸ್‌ನ ಮಾಜಿ ಅಧ್ಯಕ್ಷ ರಮೇಶ್‌ ಗೋಪಾಲ್, ಎಸಿಸಿಇಎನ ಅಧ್ಯಕ್ಷ ಹೊಸೂರು ಈಶ್ವರ ಗೌಡ, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಒಂದೇ ಸೂರಿನಡಿ ಕಟ್ಟಡ ಸಾಮಗ್ರಿಗಳ ಪರಿಚಯ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕಟ್ಟಡ ಸಾಮಗ್ರಿ ಕಂಪನಿಗಳು ಮತ್ತು ಮಾರಾಟಗಾರರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಮನೆ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಪರಿಚಯಿಸುವ ಕೆಲಸವನ್ನು ನಿರ್ಮಾಣ್ -೨೦೨೩ ಮೂಲಕ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್‌ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಕನಸಿನ ಮನೆಯ ಸಾಕಾರ
ಕಟ್ಟಡ ಸಾಮಗ್ರಿಗಳು, ಕಟ್ಟಡ ನಿರ್ಮಿಸಲು ಬೇಕಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಮೇಳದಲ್ಲಿ ಮನೆಗಳ ಇಂಟೀರಿಯರ್ ವಸ್ತುಗಳು ಲಭ್ಯವಾಗಲಿದೆ. ಮನೆ ಕಟ್ಟುತ್ತಿರುವವರು ಮತ್ತು ಮನೆ ಕಟ್ಟಲು ಬಯಸುವವರಿಗೆ ಒಂದು ಹೊಸ ಅನುಭವ ಮತ್ತು ಮನೆಯ ನಿರ್ಮಾಣಕ್ಕೆ ಬೇಕಾಗುವ ಮಾರ್ಗದರ್ಶನವು ಸಿಗಲಿದೆ. ಇಲ್ಲಿ ಒಮ್ಮೆ ಭೇಟಿ ಕೊಟ್ಟರೆ ತಮ್ಮ ಕನಸಿನ ಮನೆ ಸಾಕಾರಗೊಳ್ಳಲು ಬೇಕಾಗುವ ಸಾಮಗ್ರಿಗಳ ಮತ್ತು ಅವುಗಳ ಮಾಹಿತಿ ಲಭ್ಯವಾಗಲಿದೆ.

ನಿರ್ಮಾಣ್‌ ೨೦೨೩ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು

ಪ್ರತಿ ವರ್ಷವೂ ಪ್ರದರ್ಶನ
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್‌ ವತಿಯಿಂದ ಪ್ರತಿ ವರ್ಷವೂ ಈ ಪ್ರದರ್ಶನ ಮತ್ತು ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ೨-೩ ವರ್ಷದಿಂದ ಕೋವಿಡ್ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರಲಿಲ್ಲ. ಈ ಬಾರಿ ಉತ್ತಮವಾಗಿ ಸ್ಪಂದನೆ ಬಂದಿದೆ. ೫೫ ಕಂಪನಿಗಳು ಮತ್ತು ಮಾರಾಟಗಾರರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಮನೆ ಕಟ್ಟುವುದಕ್ಕೆ ಅನುಕೂಲವಾಗುವ ವಸ್ತುಗಳು ಮಾರುಕಟ್ಟೆಗೆ ಬರುತ್ತಿವೆ, ಇದು ಸಾರ್ಜನಿಕರಿಗೆ ಅನುಕೂಲವಾಗಲು ಇದನ್ನು ಆಯೋಜಿಸುತ್ತಿದ್ದೇವೆ ಎಂದು ಸಂಸ್ಥೆಯ ಮಾಜಿ ಉಪಾಧ್ಯಕ್ಷರಾಗಿರುವ ಮಂಜುನಾಥ್ ಬೊಮ್ಮಗಟ್ಟ ಹೇಳಿದ್ದಾರೆ.

ಉತ್ತಮ ಸ್ಪಂದನೆಗೆ ಹರ್ಷ
ವಸ್ತು ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ, ಜುವಾರಿ ಸಿಮೆಂಟ್ ಹೆಚ್ಚು ಜನರು ಬಳಕೆ ಮಾಡುವ ಸಿಮೆಂಟ್ ಆಗಿದೆ, ಇದು ಪರಿಸರ ಸ್ನೇಹಿಯಾಗಿದೆ, ಕಡಪದಿಂದ ಇಲ್ಲಿಗೆ ಸರಬರಾಜು ಮಾಡಲಾಗುತ್ತಿದೆ, ೩ ಸಾವಿರ ಟನ್‌ವರೆಗೆ ಬಳ್ಳಾರಿಯಲ್ಲಿ ಮಾರಾಟ ಮಾಡುತ್ತಿದ್ದೇವೆ, ಪ್ರಪಂಚದಲ್ಲಿ ಎರಡನೇ ಉತ್ಪಾದಕ ಕಂಪನಿಯಾಗಿದೆ. ಗ್ರಾಹಕರಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ವಸ್ತು ಪ್ರದರ್ಶನದ ಬಗ್ಗೆ ಜುವಾರಿ ಸಿಮೆಂಟ್‌ನ ಬಳ್ಳಾರಿ ಎಜಿಎಂ ಪಂಪನ ಗೌಡ ಹೇಳಿದ್ದಾರೆ.

ಇದನ್ನೂ ಓದಿ | Nirman 2023 Exhibition | ಇಂದಿನಿಂದ 3 ದಿನ ಬಳ್ಳಾರಿಯಲ್ಲಿ ನಿರ್ಮಾಣ್‌-2023- ಮನೆ ನಿರ್ಮಾಣ ಸಾಮಗ್ರಿಗಳ ವಸ್ತು ಪ್ರದರ್ಶನ

Exit mobile version