ಉಡುಪಿ: ಆರ್ಥಿಕ ಸಬಲೀಕರಣಕ್ಕೆ ಶಿಕ್ಷಣವೇ ಮೂಲ ಕಾರಣ ಎಂಬ ನಿಟ್ಟಿನಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದ ಉದ್ಯಮಿಯೊಬ್ಬರಿಗೆ ಅದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಉದ್ಯಮಿಯ ಸಹಾಯವನ್ನು ನೆನೆದು ಹಳೆಯ ವಿದ್ಯಾರ್ಥಿಗಳು, ಸರಿಯಾದ ಸೂರಿಲ್ಲದ ಬಡ ವಿದ್ಯಾರ್ಥಿಯೊಬ್ಬರಿಗೆ ಮನೆಯನ್ನು (Nittur School) ಕಟ್ಟಿಸಿಕೊಟ್ಟಿದ್ದಾರೆ. ವಿಶೇಷ ಎಂದರೆ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ್ದ ಉದ್ಯಮಿಯ ಹೆಸರನ್ನು ಆ ಮನೆಗೆ ಇಟ್ಟಿದ್ದಾರೆ.
ಇಲ್ಲಿನ ನಿಟ್ಟೂರು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಜತೆಯಾಗಿ 10ನೇ ತರಗತಿಯ ವಿದ್ಯಾರ್ಥಿ ದೀಕ್ಷಿತ್‌ಗೆ ಕರಂಬಳ್ಳಿಯಲ್ಲಿ ನೂತನ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಮನೆಗೆ ಉದ್ಯಮಿ ಎಚ್.ಎಸ್ ಶೆಟ್ಟಿ (ಶ್ರೀನಿವಾಸ) ಅವರ ಹೆಸರನ್ನಿಟ್ಟು ಈ ಮೂಲಕ ಶಿಕ್ಷಣಕ್ಕೆ ದಾರಿ ದೀಪವಾಗಿದ್ದವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಅಂದಹಾಗೆ ಬೆಂಗಳೂರಿನ ಉದ್ಯಮಿ ಎಚ್.ಎಸ್. ಶೆಟ್ಟಿ ಅವರು ತಮ್ಮ ತಂದೆಯ ಹೆಸರಿನಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿಯನ್ನು ಸ್ಥಾಪಿಸಿ, ಆ ಮೂಲಕ ಕನ್ನಡ ಶಾಲೆಯ ಉಳಿವು ಬೆಳವಣಿಗೆಗಾಗಿ ವಿಶೇಷ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಿಟ್ಟೂರು ಶಾಲೆಗೆ ೧ ಕೋಟಿ ರೂಪಾಯಿಯ ಬೃಹತ್ ಅನುದಾನವನ್ನು ನೀಡಿದ್ದಾರೆ. ಅಲ್ಲದೆ, ಈ ಮೂಲಕ ಆರ್ಥಿಕವಾಗಿ ಹಿಂದುಳಿದ ಹಲವಾರು ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡಿದ್ದಾರೆ, ಮಾಡುತ್ತಾ ಬಂದಿದ್ದಾರೆ. ಆಗ ಆರ್ಥಿಕ ನೆರವು ಪಡೆದುಕೊಂಡವರು ಈಗ ಒಳ್ಳೊಳ್ಳೇ ಉದ್ಯೋಗದಲ್ಲಿದ್ದು, ಇವರೆಲ್ಲರೂ ಸೇರಿ ಹಣವನ್ನು ಹಾಕಿ ಶ್ರೀನಿವಾಸ ಶೆಟ್ಟಿ ಅವರಿಗೆ ಕೃತಜ್ಞತಾ ರೂಪದಲ್ಲಿ ಅದೇ ಶಾಲೆಯ ವಿದ್ಯಾರ್ಥಿ ದೀಕ್ಷಿತ್‌ನಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಆ ಮನೆಗೆ “ಶ್ರೀನಿವಾಸ ನಿಲಯ” ಎಂದು ಹೆಸರಿಟ್ಟಿದ್ದಾರೆ.
ಈ ನೂತನ ಮನೆಯನ್ನು ಶಾಸಕ ರಘುಪತಿ ಭಟ್, ಮೈಸೂರು ಮರ್ಕಂಟೈಲ್ ಕಂಪೆನಿಯ ಸಂಸ್ಥಾಪಕ ಎಚ್.ಎಸ್ ಶೆಟ್ಟಿ ಉದ್ಘಾಟಿಸಿದರು. ಈ ಮೂಲಕ ಸರಿಯಾದ ಸೂರು ಇಲ್ಲದೆ, ಓದಿಗೂ ಕಷ್ಟಪಡುತ್ತಿದ್ದ ದೀಕ್ಷಿತ್ ಕುಟುಂಬಕ್ಕೆ ಹಳೇ ವಿದ್ಯಾರ್ಥಿಗಳು ಮನೆ ಕಟ್ಟಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಇದೇ ರೀತಿ ಮತ್ತೊಬ್ಬರಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ; ಸಂಸತ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ