ಯಾದಗಿರಿ: ಸಮರ್ಪಕ ಬಸ್ ಸೌಲಭ್ಯವಿಲ್ಲದೆ (Bus) ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ (School) ಹಾಗೂ ಕಾಲೇಜುಗಳಿಗೆ (Colleges) ತೆರಳಲು ವಿದ್ಯಾರ್ಥಿಗಳು (Students) ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ನಿತ್ಯವೂ ತೆರಳಬೇಕೆಂದರೆ ಆರ್.ಹೊಸಳ್ಳಿ ತಾಂಡಾ, ಆಶಾಪುರ ತಾಂಡಾ, ಗಿದ್ದಬಂಡಿ ತಾಂಡಾದ ವಿದ್ಯಾರ್ಥಿಗಳು ಬಸ್ ಸೌಲಭ್ಯವಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಟ್ರ್ಯಾಕ್ಟರ್‌ನಲ್ಲಿ ನಿತ್ಯ ಸಂಚಾರ
ಬಸ್ ಸೌಲಭ್ಯವಿಲ್ಲದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ ತಾಂಡಾಗಳಿಂದ 8 ಕಿ.ಮೀ ನಡೆದುಕೊಂಡು ಎಲ್ಹೇರಿ ಪ್ರೌಢ ಶಾಲೆಗೆ ತೆರಳುತ್ತಾರೆ. ಶಾಲೆಗೆ ತೆರಳುವ ವೇಳೆ ಟ್ರ್ಯಾಕ್ಟರ್ ಅಥವಾ ಬೇರೆ ಯಾವುದಾದರೂ ವಾಹನಗಳು ದಾರಿ ಮಧ್ಯೆ ಬಂದರೆ ಅವುಗಳಲ್ಲಿ ಶಾಲೆಗೆ ತೆರಳುತ್ತಾರೆ.
ಇದನ್ನೂ ಓದಿ: Chandrayaan 3: ಚಂದ್ರಯಾನದ ಯಶಸ್ಸಿನಿಂದ ಭಾರತಕ್ಕೆ ಆಗುವ ಲಾಭಗಳೇನು?
ಅಪಾಯಕಾರಿ ಪ್ರಯಾಣ
ವಿದ್ಯಾರ್ಥಿಗಳು ಟ್ರಾಕ್ಟರ್ ಮುಂದೆ, ಟ್ರ್ಯಾಕ್ಟರ್ ಟ್ರಾಲಿ ಮೇಲೆ, ಹಿಂಭಾಗ ಕುಳಿತುಕೊಂಡು ಹೋಗುವ ಅಪಾಯಕಾರಿ ಪ್ರಯಾಣದ ದೃಶ್ಯ ನಿಜಕ್ಕೂ ಭೀತಿ ಮೂಡಿಸುತ್ತದೆ, ಸ್ವಲ್ಪ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿರುತ್ತದೆ. ಆದರೆ ವಿದ್ಯಾರ್ಥಿಗಳು ಶಾಲೆಗೆ ಸಮಯಕ್ಕೆ ಸರಿಯಾಗಿ ಹೋಗಬಹುದು ಎನ್ನುವ ಕಾರಣಕ್ಕಾಗಿ ದಾರಿ ಮಧ್ಯೆ ಸಿಕ್ಕ ವಾಹನಗಳಲ್ಲಿ ಸಂಚರಿಸುತ್ತಿರುವುದು ನಿಜಕ್ಕೂ ಆತಂಕದ ಸಂಗತಿಯಾಗಿದೆ.
ತಾಲೂಕಿನ ಕಾಳಬೆಳಗುಂದಿ ಗ್ರಾಮದಲ್ಲಿ ಕೂಡ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದ್ದಾರೆ. ಬಸ್ ತುಂಬಿಕೊಂಡು ಬಂದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಬಸ್‌ನ ಬಾಗಿಲು ಬಳಿ ನಿಂತು ಪ್ರಯಾಣಿಸುವಂತಾಗಿದೆ. ಬಸ್‌ನಲ್ಲಿ ಕೂಡಲು ಆಸನಗಳಿಲ್ಲದೇ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಕಷ್ಟವಾಗಿದೆ.
ಮಳೆ ಬಂದಾಗ ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾದರೆ ಸಂಕಷ್ಟ ಎದುರಿಸುತ್ತಾರೆ. ಯಾದಗಿರಿ ಜಿಲ್ಲಾಕೇಂದ್ರಕ್ಕೆ ಆಗಮಿಸಿ ಮರಳಿ ಊರಿಗೆ ತೆರಳಲು ಬಸ್ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಕ್ತಿ ಯೋಜನೆಯ ಜಾರಿ ನಂತರ ಈ ಯೋಜನೆಯು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದ್ದು, ಗ್ರಾಮೀಣ ಭಾಗದಲ್ಲಿ ಬಸ್‌ಗಳಿಲ್ಲದೇ ವಿದ್ಯಾರ್ಥಿಗಳು ಪ್ರತಿದಿನ ಶಾಲಾ ಕಾಲೇಜುಗಳಿಗೆ ಹೋಗಿಬರಲು ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: Economy of India: 20 ವರ್ಷಗಳಲ್ಲಿ ಭಾರತದ ಆರ್ಥಿಕ ಅಸಮಾನತೆ ಏರಿಕೆ; ಎಷ್ಟಾಗಿದೆ ನೋಡಿ
ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದಿಂದ ಮರಳಿ ತಮ್ಮ ಊರಿಗೆ ಬಸ್‌ನಲ್ಲಿ ಹೋಗಬೇಕೆಂದರೆ ಒಳಗಡೆ ಆಸನಗಳಿಲ್ಲದೇ ಬಸ್‌ನ ಬಾಗಿಲು ಬಳಿ ನಿಂತು ವಿದ್ಯಾರ್ಥಿಗಳು ಅಪಾಯದ ನಡುವೆ ಪ್ರಯಾಣ ಮಾಡುತ್ತಾರೆ. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಕಾಳಬೆಳಗುಂದಿ ಗ್ರಾಮಸ್ಥ ತಾಯಪ್ಪ ಆಗ್ರಹಿಸಿದ್ದಾರೆ.