ಬೆಂಗಳೂರು: ಅತಿ ವೇಗದ ಚಾಲನೆಯಿಂದ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಆಗಸ್ಟ್ 1ರಿಂದ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ನಿಯಮ ಮೀರಿ ಹೆದ್ದಾರಿಯಲ್ಲಿ (Bangalore-Mysore Expressway) ಸಂಚರಿಸಿದರೆ ದಂಡ ಬೀಳುವುದು ಗ್ಯಾರಂಟಿಯಾಗಿದೆ.
ಈ ಬಗ್ಗೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಹೊಸ ನಿಯಮದ ಪ್ರಕಾರ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಸೇರಿ ಕೆಲ ವಾಹನಗಳು ಇನ್ನು ಮುಂದೆ ಸರ್ವೀಸ್ ರಸ್ತೆಯಲ್ಲಷ್ಟೇ ಸಂಚರಿಸಬೇಕು. ಮೋಟಾರು ವಾಹನ ಕಾಯ್ದೆಯ ಅನ್ವಯ ಪ್ರಾಧಿಕಾರವು ಜುಲೈ 12ರಂದು ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ವಾಹನ ಸವಾರರು, ಚಾಲಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹೆದ್ದಾರಿ ಪ್ರವೇಶದಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
ಪೊಲೀಸರ ಸಹಯೋಗದಲ್ಲಿ ಕೆಲ ಲಘು ವಾಹನಗಳಿಗೆ ನಿಷೇಧ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮೊದಲ ದಿನವಾದ ಮಂಗಳವಾರ ಪ್ರಾಧಿಕಾರಿದ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ನಿಯಮ ಮೀರಿ ಹೆದ್ದಾರಿಯಲ್ಲಿ ಸಂಚರಿಸಿದ ವಾಹನಗಳಿಗೆ ದಂಡ ವಿಧಿಸಿದ್ದು ಕಂಡುಬಂತು.
ಇದನ್ನೂ ಓದಿ | Highway Robbery : ಮೈಸೂರು- ಊಟಿ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ದರೋಡೆ, ಲಾಂಗ್ ಬೀಸಿ ಚಿನ್ನಾಭರಣ ಲೂಟಿ
ಬೈಕ್ ಸವಾರನಿಗೆ ಬಿತ್ತು ದಂಡ
ನಿಯಮ ಉಲ್ಲಂಘಿಸಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರೊಬ್ಬರಿಗೆ 500 ರೂ. ದಂಡ ಬಿದ್ದಿದೆ. ರಾಮನಗರದ ಸಂಘಬಸವನ ದೊಡ್ಡಿ ಎಕ್ಸಿಟ್ ಗೇಟ್ ಬಳಿ ಹೆದ್ದಾರಿಯಲ್ಲಿ ಆಗಮಿಸುತ್ತಿದ್ದ ಸವಾರನನ್ನು ಸಂಚಾರ ಪೊಲೀಸರು ತಡೆದು 500 ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಿಸಿಕೊಂಡ ಬಳಿಕ ಬೈಕ್ ಸವಾರರು ಸರ್ವೀಸ್ ರಸ್ತೆ ಬಳಸುವಂತೆ ಸಂಚಾರ ನಿಯಮಗಳ ಕುರಿತು ಪೊಲೀಸರು ತಿಳಿಹೇಳಿದ್ದಾರೆ.
ಯಾವ ವಾಹನಗಳಿಗೆ ನಿಷೇಧ
- ಮೋಟಾಲ್ ಸೈಕಲ್ಗಳು (ಸ್ಕೂಟರ್ ಹಾಗೂ ಇತರ ದ್ವಿಚಕ್ರ ವಾಹನ)
- ಮೂರು ಚಕ್ರದ ವಾಹನಗಳು (ಇ- ಗಾಡಿ, ಇ-ರಿಕ್ಷಾ)
- ಮೋಟಾರ್ ರಹಿತ ವಾಹನಗಳು
- ಟ್ರೈಲರ್ ಸಹಿತ ಅಥವಾ ರಹಿತವಾದ ವಿಶೇಷ ಟ್ರ್ಯಾಕ್ಟರ್‌ಗಳು
- ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು
- ಕ್ವಾಡ್ರಿ ಸೈಕಲ್ಗಳು
ನಿಯಮ ಉಲ್ಲಂಘಿಸಿದರೆ 500 ರೂ. ದಂಡ
ರಾಮನಗರ: ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳ ನಿರ್ಬಂಧ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿ ಹೆದ್ದಾರಿಯಲ್ಲಿ ಸಂಚರಿಸಿದರೆ 500 ರೂ. ದಂಡ ವಿಧಿಸಲಾಗುತ್ತದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಅಪಘಾತಗಳ ತಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದೆ. ಬೈಕ್, ಆಟೋ, ಟ್ರ್ಯಾಕ್ಟರ್‌ಗಳು ಹೆದ್ದಾರಿಯಲ್ಲಿ ಸಂಚರಿಸುವಂತಿಲ್ಲ. ಬದಲಿಗೆ ಸರ್ವೀಸ್ ರಸ್ತೆ ಬಳಸಿಕೊಳ್ಳಬೇಕು. ಜು.12 ರಂದೇ ಈ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿನ್ನೆಲೆ ಹೊಸ ನಿಯಮ ಅನ್ವಯ ಆಗಲಿದೆ. ಕೆಲವೆಡೆ ಸರ್ವೀಸ್ ರಸ್ತೆಯಲ್ಲಿ ಸಮಸ್ಯೆ ಇದೆ. ಅದನ್ನ ಶೀಘ್ರವಾಗಿ ಸರಿಪಡಿಸುವಂತೆ ಎನ್‌ಎಚ್‌ಎಐ ಅಧಿಕಾರಿಗಳ ಜತೆ ಮಾತನಾಡಲಾಗಿದೆ. ವಾಹನ ಸವಾರರು ನಿಯಮ ಪಾಲನೆ ಮಾಡಬೇಕು. ಇಲ್ಲದಿದ್ದರೆ ಪೊಲೀಸ್ ಇಲಾಖೆಯಿಂದ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Road Accident : ಯಮ ಸ್ವರೂಪಿಯಾಗಿ ನುಗ್ಗಿ ಕೂಲಿ ಕಾರ್ಮಿಕರ ಮೇಲೆ ಹರಿದ ಕ್ಯಾಂಟರ್!
ಪೊಲೀಸರ ಗಸ್ತು ಆರಂಭ
ಮೈಸೂರು: ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹಬಗಳು ಸಂಚರಿಸದಂತೆ ಅರಿವು ಮೂಡಿಸಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಜಂಕ್ಷನ್‌ನಲ್ಲಿ ಪೊಲೀಸರ ಗಸ್ತು ಆರಂಭವಾಗಿದೆ. ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳು ಓಡಾಡದಂತೆ ಮೈಕ್ ಮೂಲಕ ವಾಹನ ಸವಾರರಿಗೆ ಮನವಿ ಸಂಚಾರ ಪೊಲೀಸರು ಮನವಿ ಮಾಡುತ್ತಿದ್ದಾರೆ. ಮುಖ್ಯ ರಸ್ತೆ ಹಾಗೂ ಸರ್ವೀಸ್ ರಸ್ತೆ ಮಧ್ಯ ಬ್ಯಾರಿಗೇಟ್‌ಗಳನ್ನು ಹಾಕಲಾಗಿದೆ.
ಒಂದೆಡೆ ಪೊಲೀಸರು ಅರಿವು ಮೂಡಿಸುತ್ತಿದ್ದರೆ, ಮತ್ತೊಂದೆಡೆ ಕೆಲ ವಾಹನ ಸವಾರರು, ನಿಮಯ ಉಲ್ಲಂಘಿಸಿ ಸಂಚರಿಸುತ್ತಿರುವುದು ನಗರದಲ್ಲಿ ಕಂಡುಬಂದಿದೆ. ಇದರಿಂದ ಹೆದ್ದಾರಿ ಪ್ರಾಧಿಕಾರದ ಹೊಸ ರೂಲ್ಸ್ ಆದೇಶಕ್ಕೆ ಸೀಮಿತವಾದಂತಾಗಿದೆ.