ಚಾಮರಾಜನಗರ: ʻʻಸಿಎಂ ಅಂಕಲ್ ನಮಗೆ ಶಾಲೆಗೆ ಹೋಗಲು ಬಸ್ ಇಲ್ಲ. ನೀವು ನಾಳೆ ನಮ್ಮೂರಿಗೆ ಬಂದಾಗ ಬಸ್ ಸೌಲಭ್ಯದ ಘೋಷಣೆ ಮಾಡಬೇಕು. ಇಲ್ಲ ಅಂದರೆ ನಾವು ಯಾರೂ ಶಾಲೆಗೆ ಹೋಗುವುದಿಲ್ಲʼʼ ಎಂದು ಇಲ್ಲಿನ ಹನೂರಿನ ಬುಡಕಟ್ಟು ಸೋಲಿಗ ಮಕ್ಕಳು (CM Basavaraja bommai) ಹಠ ಹಿಡಿದಿದ್ದಾರೆ!
ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆಗಾಗಿ ಸೋಮವಾರ (ಡಿ.1೨) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜ ನಗರ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾರೆ. ಇದೇ ವೇಳೆ ಹನೂರು ಗ್ರಾಮಕ್ಕೂ ಸಿಎಂ ಭೇಟಿ ಹಿನ್ನೆಲೆ ಶಾಲಾ ಮಕ್ಕಳು ಬಸ್ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಊರಿಗೆ ಬಸ್ ಸಂಪರ್ಕ ಇಲ್ಲದ ಕಾರಣ ಶಾಲೆಗೆ ಹೋಗಬೇಕಾದರೆ ನಿತ್ಯ 6 ಕಿ.ಮೀ ನಡೆದುಕೊಂಡು ಹೋಗಿ ಬರಬೇಕು. ಮಳೆ, ಚಳಿ, ಬಿಸಿಲು ಏನಿದ್ದರೂ ತೂಕದ ಬ್ಯಾಗ್ ಹೊತ್ತುಕೊಂಡು ಹೋಗಬೇಕು. ಮಳೆಗಾಲದಲ್ಲಂತೂ ಶಾಲಾ ಬ್ಯಾಗ್, ಬಟ್ಟೆ ಎಲ್ಲ ನೆನೆದುಹೋಗುತ್ತದೆ. ನಾವು ನಡೆದಾಡುವ ಸುತ್ತಮುತ್ತ ಕಾಡು ಇರುವುದರಿಂದ ಕಾಡು ಪ್ರಾಣಿಗಳ ಭಯವೂ ಇದೆ ಎಂದು ಮಕ್ಕಳು ಬೇಸರದಿಂದ ಹೇಳಿದ್ದಾರೆ.
ರಸ್ತೆ ಚೆನ್ನಾಗಿದೆ. ಆದರೆ ಬಸ್ ಇಲ್ಲ ಎಂದು ಹನೂರು ತಾಲೂಕಿನ ಅರೆಕಡುವಿನದೊಡ್ಡಿ, ಕಂಬಿದೊಡ್ಡಿ ಸೋಲಿಗರ ಮಕ್ಕಳ ಅಳಲು ತೊಡಿಕೊಂಡಿದ್ದಾರೆ. 6 ರಿಂದ 10ನೇ ತರಗತಿ ಓದುತ್ತಿರುವ ಸುಮಾರು 40ಕ್ಕೂ ಹೆಚ್ಚು ಮಕ್ಕಳು, ಬೈಲೂರು ಶಾಲೆಗೆ ಹೋಗಬೇಕಿದೆ. ಹೀಗಾಗಿ ಊರಿಗೆ ಬಂದಾಗ ಬಸ್ ಸೌಲಭ್ಯವನ್ನು ಘೋಷಣೆ ಮಾಡುವಂತೆ ಮಕ್ಕಳು ಪಟ್ಟುಹಿಡಿದಿದ್ದಾರೆ.
ಇದನ್ನೂ ಓದಿ | Janardhan Reddy | ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮೂಲಕ ಜನಾರ್ದನ ರೆಡ್ಡಿ ರಾಜಕೀಯ ಮರು ಪ್ರವೇಶ?