ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ (ASHA workers) ಗೌರವಧನ ಮತ್ತು ಪ್ರೋತ್ಸಾಹಧನವನ್ನು (No Salary) ಇನ್ನೂ ನೀಡಿಲ್ಲ. ಹೀಗಾಗಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ವಿಷಾದ ವ್ಯಕ್ತಪಡಿಸಿದೆ. ಕಳೆದ ಮೂರು, ನಾಲ್ಕು ತಿಂಗಳಿಂದ ಆಶಾ ಕಾರ್ಯಕರ್ತೆಯರು ನಿಷ್ಠೆಯಿಂದ ಬಿರು ಬಿಸಿಲಿನಲ್ಲಿ ಇಲಾಖೆಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅವರ ಸೇವೆಗೆ ವೇತನ ನೀಡದೆ ಇಲಾಖೆ ಅವರನ್ನು ಕಷ್ಟಕ್ಕೆ ದೂಡಿದೆ ಎಂದು ಸಂಘ ಕಿಡಿಕಾರಿದೆ.
ರಾಜ್ಯದಲ್ಲಿ ಒಟ್ಟು 42 ಸಾವಿರ ಆಶಾ ಕಾರ್ಯಕರ್ತರು ಇದ್ದಾರೆ. ಒಂಟಿ ಮಹಿಳೆಯರು ಸೇರಿದಂತೆ ಬಹುತೇಕ ಆಶಾ ಕಾರ್ಯಕರ್ತೆಯರು ಈ ಕೆಲಸದಿಂದ ಜೀವನ ನಿರ್ವಹಿಸುತ್ತಿದ್ದಾರೆ. ಆದರೆ ಇದೀಗ ವೇತನ ಇಲ್ಲದೆ ಜೀವನ ನಡೆಸಲು ಕಷ್ಟ ಪಡುತ್ತಿದ್ದು, ತೊಂದರೆಗೆ ಸಿಲುಕಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಇಲಾಖೆಯ ಮುಖ್ಯಸ್ಥರಿಗೆ ವೇತನ ಬಿಡುಗಡೆ ಮಾಡಲು ಹಲವಾರು ಬಾರಿ ಮೌಖಿಕವಾಗಿ ಮತ್ತು ವಿವಿಧ ಸಭೆಗಳಲ್ಲಿ ಮನವಿ ನೀಡಲಾಗಿತ್ತು. ಆದರೆ ಪ್ರತಿ ಬಾರಿ ಒಂದು ವಾರದಲ್ಲಿ ಹಣ ಬಿಡುಗಡೆ ಆಗುವುದೆಂದು ಭರವಸೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ ಈವರೆಗೂ ಗೌರವಧನ ಬಿಡುಗಡೆ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Murder Case: ಕಾಂಗ್ರೆಸ್ ಕಾರ್ಯಕರ್ತನ ಅಟ್ಟಾಡಿಸಿ, ಕಲ್ಲು ಎತ್ತಿಹಾಕಿ ಕೊಂದ ಹಂತಕರು
ಹೀಗಾಗಿ ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆಗೆ ನೂತನ ಸರ್ಕಾರದ ಮುಂದೆ ಅಹವಾಲು ತೋಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಂಘವು ಮನವಿ ಮಾಡಿದೆ. ಪದೇ ಪದೆ ಸಭೆಗಳನ್ನು ಮಾಡಿ ಟೊಳ್ಳು ಭರವಸೆ ಕೊಡುವ ಬದಲು ಹಣ ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ