ಬೆಳಗಾವಿ: 2024ರ ಲೋಕಸಭೆ ಚುನಾವಣೆ ನಂತರ ದೇಶದಲ್ಲಿ 50 ಹೊಸ ರಾಜ್ಯಗಳು ಉದಯಿಸಲಿವೆ. ಕರ್ನಾಟಕವೂ ಎರಡು ಭಾಗಗಳಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಆಹಾರ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗಿದೆ. ಧಾರವಾಡದಲ್ಲಿ ಹೈಕೋರ್ಟ್ ಪೀಠ, ಬೆಳಗಾವಿಯಲ್ಲಿ ಸುವರ್ಣಸೌಧ ಇದೆ. ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾನ ನಿರ್ಮಿಸುವ ಚರ್ಚೆ ನಡೆದಿದೆ. ಪ್ರತ್ಯೇಕ ರಾಜ್ಯಕ್ಕೆ ಬೇಕಾದ ಮೂಲಸೌಕರ್ಯ ನಮ್ಮಲ್ಲಿವೆ. ಮಹಾರಾಷ್ಟ್ರದಲ್ಲಿ 3, ಉತ್ತರ ಕರ್ನಾಟಕದಲ್ಲಿ 4 ಹಾಗೂ ಕರ್ನಾಟಕದಲ್ಲೂ ಎರಡು ರಾಜ್ಯ ಆಗುತ್ತವೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಮಾತನಾಡಿದ್ದರು. ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ, ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಳೆದ ವರ್ಷ ಹೇಳಿದ್ದರು. ಇನ್ನು ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಈ ಭಾಗದ ಜನರ ಸಹಕಾರದಿಂದ ಪ್ರತ್ಯೇಕ ರಾಜ್ಯ ಕಟ್ಟುವುದು ಶತಃಸಿದ್ಧ. ನಾನು ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲ ಮಾಡಿದ್ದೇನೆ. ನನಗೂ ಮುಖ್ಯಯಂತ್ರಿಯಾಗುವ ಆಸೆ ಇದೆ. ಮುಂದಿನ ಮುಖ್ಯಮಂತ್ರಿ ಅರವಿಂದ ಬೆಲ್ಲದ, ನಿರಾಣಿ ಅಥವಾ ನಾನೇ ಆಗಬಹುದು ಎಂದು ಹೇಳಿದ್ದರು.