ಮಂಗಳೂರು: ಹಿಜಾಬ್ ವಿದ್ಯಾರ್ಥಿನಿಯರಿಗೆ ವಿವಿ ಕಾಲೇಜು ಪ್ರಾಂಶುಪಾಲೆ ಡಾ. ಅನುಸೂಯ ರೈ ನೋಟೀಸ್ ನೀಡಿದ್ದಾರೆ. ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಅವಕಾಶ ನೀಡದಿದ್ದರೆ ಪ್ರತಿಭಟನೆ ನೀಡುವುದಾಗಿ ವಿದ್ಯಾರ್ಥಿನಿಯರು ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
ಮೇ 30ರಂದು ಕಾಲೇಜಿನ ಕ್ಯಾಂಪಸ್ ಒಳಗೆ 12 ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದ ಕಾರಣ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ವಾಪಸ್ ಕಳಿಸಿದ್ದರು. ಹೈಕೋರ್ಟ್ ಆದೇಶ ಹಾಗೂ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ತರಗತಿಗೆ ಪ್ರವೇಶ ನೀಡಲು ಅವಕಾಶ ಇಲ್ಲ ಎಂದು ಪ್ರಾಂಶುಪಾಲೆ ಅನಸೂಯಾ ರೈ ತಿಳಿಸಿದ್ದರು. ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುವುದಾಗಿ ತೆರಳಿದರು.
ಇದನ್ನೂ ಓದಿ | HIJAB | ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಪ್ರತಿಭಟನೆ ಎಂದ ವಿದ್ಯಾರ್ಥಿನಿಯರು
ವಿದ್ಯಾರ್ಥಿನಿಯರ ಮಾತನ್ನು ಆಲಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಲೇಬೇಕು. ಸಿಡಿಸಿ ಸಭೆಯಲ್ಲಿ ಈ ಕುರಿತು ನಿರ್ಣಯ ಆಗಿದೆ. ಸಿಡಿಸಿ ನಿರ್ಣಯವನ್ನು ನಾನು ಬದಲಾಯಿಸುವಂತಿಲ್ಲ. ನೀವು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿ. ಹಿಜಾಬ್ ವಿಚಾರದಲ್ಲಿ ಶಿಕ್ಷಣ ಹಾಳಾಗದಿರಲಿ. ಎಲ್ಲರೂ ತರಗತಿಗೆ ಹಾಜರಾಗುವಂತೆ ಸಲಹೆ ನೀಡಿದರು. ಆದರೆ ತಾವು ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುತ್ತೇವೆ ಎನ್ನುತ್ತ ವಿದ್ಯಾರ್ಥಿನಿಯರು ಡಿಸಿ ಕಚೇರಿಯಿಂದ ಹೊರನಡೆದಿದ್ದರು.
ನಂತರ ವಿದ್ಯಾರ್ಥಿನಿಯರು ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದರು. ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆಯೇ ಇರಲಿಲ್ಲ. ಹೈಕೋರ್ಟ್ ಆದೇಶದ ನಂತರವೂ ನಾವು ಹಿಜಾಬ್ (Hijab) ಧರಿಸಿಯೇ ತೆರಳುತ್ತಿದ್ದೆವು. ಆದರೆ ಎಬಿವಿಪಿ ಒತ್ತಾಯಕ್ಕೆ ಮಣಿದು ಪ್ರಾಂಶುಪಾಲರು ಈಗ ಹಿಜಾಬ್ ಧರಿಸಲು ನಿರಾಕರಿಸುತ್ತಿದ್ದಾರೆ.
ಈ ಶೈಕ್ಷಣಿಕ ವರ್ಷ ಹಳೆಯ ವಸ್ತ್ರ ಸಂಹಿತೆಯನ್ನೇ ಮುಂದುವರಿಸಬೇಕು. ನಾವು ಹಿಂದಿನಿಂದಲೂ ಸಮವಸ್ತ್ರದ ವೇಲನ್ನು ಹಿಜಾಬ್ ಆಗಿ ಧರಿಸಿ ಬರುತ್ತಾ ಇದ್ದೇವೆ. ಕಾಲೇಜಿನ ಈ ಆದೇಶಕ್ಕೂ ಹೈಕೋರ್ಟ್ ಆದೇಶಕ್ಕೂ ಸಂಬಂಧ ಇಲ್ಲ. ಹಿಜಾಬ್ ನಿಷೇಧಿಸುವ ಉದ್ದೇಶ ತಮಗೂ ಇಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ಎಬಿವಿಪಿ ಒತ್ತಡದಿಂದಲೇ ಈ ಆದೇಶ ಮಾಡಿದ್ದಾರೆ. ಪ್ರಾಂಶುಪಾಲರು, ಸಿಂಡಿಕೇಟ್ ಸದಸ್ಯರ ವಿರುದ್ಧ ಕೇಸು ದಾಖಲಿಸಬೇಕು. ಅವರ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಬೇಕು. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಮಂಗಳೂರು ವಿವಿ ಸಮನ್ವಯ ಸಮಿತಿ ಮೂಲಕ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಇಷ್ಟೆಲ್ಲ ವಿವಾದದ ನಂತರ ವಿದ್ಯಾರ್ಥಿನಿಯರಿಗೆ ಕಾಲೇಜು ನೋಟಿಸ್ ನೀಡಿದೆ. ಹಿಜಾಬ್ ವಿದ್ಯಾರ್ಥಿನಿ ಗೌಸಿಯಾ ಸೇರಿ ಇತರ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲೆ ಅನಸೂಯ ರೈ ಮೊದಲ ಹಂತವಾಗಿ ನೋಟೀಸ್ ನೀಡಿ ಎಚ್ಚರಿಕೆ ನೀಡಿದ್ದಾರೆ. ನೋಟೀಸ್ ಬಳಿಕವೂ ನಿಯಮ ಮೀರಿದರೆ ಕಾಲೇಜಿನಿಂದ ಅಮಾನತು ಮಾಡುವ ಸಾದ್ಯತೆ ಎನ್ನಲಾಗಿದೆ.
ಇದನ್ನೂ ಓದಿ | ವರದಿ ಮಾಡಲು ಹೋದ ಪತ್ರಕರ್ತರ ಮೇಲೆಯೇ ಕೇಸು ದಾಖಲಿಸಿದ ಹಿಜಾಬ್ ಹುಡುಗಿಯರು