Site icon Vistara News

ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಿಂಚಲಿದೆ ʼನೃತ್ಯ ಕುಟೀರʼ ಭರತನಾಟ್ಯ ತಂಡ

Nrithya kuteera team

ಬೆಂಗಳೂರು: ನಗರದ ʼನೃತ್ಯ ಕುಟೀರʼ ಸಂಸ್ಥೆಯ ಭರತನಾಟ್ಯ ನೃತ್ಯ ತಂಡವು ಜ.26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ (Republic Day 2024) ಪರೇಡ್‌ನಲ್ಲಿ ಕಲಾ ಪ್ರದರ್ಶನ ಮಾಡುವ ಅವಕಾಶ ಪಡೆದಿದೆ. ʼನೃತ್ಯ ಕುಟೀರʼ (Nrithya kuteera) ಸಂಸ್ಥೆಯ ಗುರು ವಿದುಷಿ ದೀಪಾ ಭಟ್ ಅವರ ಆರು ಹಿರಿಯ ಪ್ರತಿಭಾವಂತ ಶಿಷ್ಯೆಯರು, ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭರತನಾಟ್ಯ ಪ್ರದರ್ಶಿಸಲಿದ್ದಾರೆ.

ಭಾರತ ಗಣರಾಜ್ಯೋತ್ಸವ 2024ರ ಪ್ರಯುಕ್ತ ದೆಹಲಿಯ ಕೇಂದ್ರ ನೃತ್ಯ ಸಂಗೀತ ಅಕಾಡೆಮಿ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ನಡೆಸಿದ ʼವಂದೇ ಭಾರತಂʼ ಎಂಬ ರಾಷ್ಟ್ರಮಟ್ಟದ ಆ ನೃತ್ಯ ಸ್ಪರ್ಧೆಯಲ್ಲಿ ನೃತ್ಯ ಕುಟೀರ ಸಂಸ್ಥೆಯ ತಂಡ ಆಯ್ಕೆಯಾಗಿದ್ದಾರೆ. ಸಾವಿರಾರು ಅರ್ಜಿಗಳ ನಡುವೆಯೂ ಕರ್ನಾಟಕದಿಂದ ಆಯ್ಕೆಯಾದ ನಾಲ್ಕು ತಂಡಗಳಲ್ಲಿ ʼನೃತ್ಯ ಕುಟೀರʼವೂ ಒಂದಾಗಿದೆ.

ಇದನ್ನೂ ಓದಿ | Raja Marga Column : ಅವಕಾಶಗಳ ಬಾಗಿಲು ತಾನಾಗಿ ತೆರೆಯಲ್ಲ, ನಾವೇ ಒದ್ದು ತೆಗೀಬೇಕು!

ಈ ಬಗ್ಗೆ ಗುರು ವಿದುಷಿ ದೀಪಾ ಭಟ್ ಅವರು ಪ್ರತಿಕ್ರಿಯಿಸಿ, ʼನೃತ್ಯ ಕುಟೀರದ ಮಾನಸ ಸುಬ್ಬಾರಾವ್, ಅನಘ ಕಶ್ಯಪ್, ನಿಧಿಶ್ರೀ ಜೆ ಕಾರಂತ್, ಹರಿಣಿಶ್ರೀ ಜೆ ಕಾರಂತ್, ಲಕ್ಷ್ಮಿ ಹಾಗೂ ದೀಕ್ಷಾ ಇದೇ ಜನವರಿ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭರತನಾಟ್ಯ ಪ್ರದರ್ಶಿಸಲು ಅಭ್ಯಾಸಕ್ಕಾಗಿ ಡಿಸೆಂಬರ್ 26ರಂದೇ ದೆಹಲಿ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

ಸತತ ಒಂದು ತಿಂಗಳ ಕಾಲ ದೆಹಲಿಯ ಸಂಗೀತ ನೃತ್ಯ ಅಕಾಡೆಮಿಯ ಆವರಣದಲ್ಲಿ, ದೇಶದ ವಿವಿಧ ಭಾಗದ ನೃತ್ಯಗಾರ್ತಿಯರೊಂದಿಗೆ ನುರಿತ ಮಾರ್ಗದರ್ಶಕರ ಬಳಿ ನೃತ್ಯಾಭ್ಯಾಸ ಮಾಡಿ, ಜನವರಿ 26 ರಂದು ದೆಹಲಿಯ “ಕರ್ತವ್ಯ ಪಥ” ದಲ್ಲಿ ಗಣ್ಯರ ಮುಂದೆ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನ ನೀಡಲು ಶಿಷ್ಯೆಯರು ತಯಾರಿ ನಡೆಸುತ್ತಿದ್ದಾರೆ. ಈ ಯುವ ನೃತ್ಯಪಟುಗಳಿಗೆ ಶುಭವಾಗಲಿ ಎಂದು ಗುರು ವಿದುಷಿ ದೀಪಾ ಭಟ್ ಹಾರೈಸಿದ್ದಾರೆ.

Exit mobile version