Site icon Vistara News

Obc reservation | ವೀರಶೈವ ಲಿಂಗಾಯತ ಒಳಪಂಗಡಗಳ ಸೇರ್ಪಡೆ

ಬಳ್ಳಾರಿ: ವೀರಶೈವ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಗಳ (OBC) ಪಟ್ಟಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿ ವೀರಶೈವ ಸಮಾಜದವರು ಅಖಿಲ ಭಾರತ ವೀರಶೈವ ಮಹಾಸಭಾದ ನೇತೃತ್ವದಲ್ಲಿ ಆ.1 ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯ ಏಚರೆಡ್ಡಿ ಸತೀಶ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಸವಾದಿ ಶರಣರು ಹಾಕಿಕೊಟ್ಟಂತಹ ಮಾರ್ಗದಲ್ಲಿ ಜಾತಿ, ಧರ್ಮದ ಭೇದವಿಲ್ಲದೇ ಎಲ್ಲ ವರ್ಗದವರಿಗೂ ಶಿಕ್ಷಣ, ವಸತಿ ಮತ್ತು ದಾಸೋಹ ನೀಡುವ ಮೂಲಕ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದವರು, ಇಂದು ನಮ್ಮ ಸಾಮಾಜಿಕ ನ್ಯಾಯಕ್ಕಾಗಿ ನಾವೇ ಹೋರಾಟ ಮಾಡುವ ಪ್ರಸಂಗ ಎದುರಾಗಿದೆ ಎಂದರು.

ಇದನ್ನೂ ಓದಿ | ಪಠ್ಯಪುಸ್ತಕ ವಿಚಾರದಲ್ಲಿ ಆತ್ಮರಕ್ಷಣೆಗೆ ʼಒಕ್ಕಲಿಗʼ ಕಾರ್ಡ್‌ ಬಳಸಿದ ಬೊಮ್ಮಾಯಿ

ಕರ್ನಾಟಕ ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ (OBC) ಪಟ್ಟಿಗೆ ಸೇರಿಸದಿರುವುದು ದುರದೃಷ್ಟಕರ ಸಂಗತಿ. ಕೇಂದ್ರದ ಹಿಂದುಳಿದ ವರ್ಗಗಳ (OBC) ಪಟ್ಟಿಯಿಂದ ನಮ್ಮ ಸಮುದಾಯವನ್ನು ಹೊರಗಿಟ್ಟಿರುವುದಕ್ಕೆ ಯಾವುದೇ ಕಾರಣಗಳಿಲ್ಲ. ವೀರಶೈವ-ಲಿಂಗಾಯತ ಸಮುದಾಯದ ಪ್ರತಿಭಾವಂತರು ದಶಕಗಳಿಂದ ಹತ್ತು ಹಲವಾರು ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.

ಆ.1ರಂದು ಮೆರವಣಿಗೆಯು ನಗರದ ಮುನ್ಸಿಪಾಲ್ ಕಾಲೇಜ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವೀರಶೈವ ಸಮಾಜದ ಚಾನಾಳ್ ಶೇಖರ್, ಅರವಿ ಬಸವನಗೌಡ, ನಿಷ್ಟಿ ರುದ್ರಪ್ಪ, ಕಿರಣ್ ಕುಮಾರ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ | ಪಠ್ಯಪುಸ್ತಕ ವಿವಾದ: ಲಿಂಗಾಯತ, ಒಕ್ಕಲಿಗ ಆಯಿತು, ಈಗ ಕುರುಬ ಸಮುದಾಯದಿಂದಲೂ ಆಕ್ಷೇಪ

Exit mobile version