ಚಿಕ್ಕಮಗಳೂರು: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತ (Odisha Train Accident)ವನ್ನು ಕಣ್ಣಾರೆ ಕಂಡ ಕುದುರೆಮುಖದ ಸಂತೋಷ್ ಎಂಬುವರು ಈ ಬಗ್ಗೆ ವಿಡಿಯೊ ಮಾಡಿ, ಮಾಹಿತಿ ನೀಡಿದ್ದಾರೆ. ಅಪಘಾತದ ನಡೆದ ಸಂದರ್ಭದಲ್ಲಿ ಬೆಂಗಳೂರು-ಹೌರಾ ರೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ. ಅದರಲ್ಲಿ ತಾವಿದ್ದಲ್ಲಿಂದಲೇ ಸಂತೋಷ್ ಎಂಬುವರು ವಿಡಿಯೊ ಮೂಲಕ ಮಾತನಾಡಿ ‘ನಾವು ಶಿಕರ್ಜಿ ಯಾತ್ರೆಗೆ ಹೊರಟಿದ್ದೆವು. ನಾವಿದ್ದ ಬೆಂಗಳೂರು-ಹೌರಾ ರೈಲು ಒಡಿಶಾ ಗಡಿ ಪಾಸ್ ಆಗಿ ಕೋಲ್ಕತ್ತಕ್ಕೆ ಹೋಗಬೇಕಿತ್ತು. ಪ್ರಯಾಣವೂ ಚೆನ್ನಾಗಿಯೇ ಆಗುತ್ತಿತ್ತು. ಆದರೆ ರಾತ್ರಿ 8.30ರ ಹೊತ್ತಿಗೆ ರೈಲು ಒಮ್ಮೆಲೇ ನಿಂತುಬಿಡ್ತು. ಬಸ್ ಅಪಘಾತವಾದಾಗಲೆಲ್ಲ ಹೇಗೆ ಶಬ್ದ ಬರುತ್ತದೆಯೋ, ಹಾಗೇ ಶಬ್ದ ಬಂತು’ ಎಂದು ಹೇಳಿದ್ದಾರೆ.
‘ಡಿಕ್ಕಿಯ ರಭಸಕ್ಕೆ ನಮ್ಮ ರೈಲಿನ ಕೆಲವು ಬೋಗಿಗಳು ಉರುಳಿಬಿದ್ದಿದ್ದವು. ಅವುಗಳಲ್ಲಿ ಇದ್ದವರಿಗೆ ಗಾಯವಾಗಿತ್ತು. ಕೆಲವು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲಿದ್ದ ಸ್ಥಳೀಯರು, ಜನರೆಲ್ಲ ಸಹಾಯಕ್ಕೆ ಬಂದರು. ನಾವೆಲ್ಲ ಸುರಕ್ಷಿತವಾಗಿದ್ದೇವೆ. ಅಲ್ಲಿನ ಡಿಸಿ, ಅಧಿಕಾರಿಗಳು ಬಂದು ನಮ್ಮನ್ನೆಲ್ಲ ವಿಚಾರಿಸಿದರು. ಎಲ್ಲಿಗೆ ಹೋಗಬೇಕು ಎಂದು ಕೇಳಿದರು. ಮಾಹಿತಿ ಪಡೆದು, ರಾತ್ರಿ 12ರ ಹೊತ್ತಿಗೆ ಕೋಲ್ಕತ್ತಕ್ಕೆ ರೈಲಿನ ವೈವಸ್ಥೆ ಮಾಡಿಸಿಕೊಟ್ಟರು. ನಾವೆಲ್ಲರೂ ಸೇಫ್ ಆಗಿದ್ದು, ಯಾತ್ರೆ ಮುಗಿಸಿ, ದೇವರ ದರ್ಶನ ಪಡೆದೇ ಬರುತ್ತೇವೆ’ ಎಂದು ಹೇಳಿದ್ದಾರೆ.
500 ಯೂನಿಟ್ ರಕ್ತ ಶೇಖರಣೆ
ಬಾಲಾಸೋರ್ನಲ್ಲಿ ನಡೆದ ರೈಲು ದುರಂತ ಇತ್ತೀಚಿನ ವರ್ಷಗಳಲ್ಲೇ ಭಯಂಕರವಾಗಿದೆ. ಆ ಪ್ರದೇಶ ರಕ್ತಸಿಕ್ತವಾಗಿದೆ. ಅಲ್ಲಿನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರೈಲಿನ ಅವಶೇಷಗಳ ತೆರುವು ಕಾರ್ಯವೂ ಭರದಿಂದ ಸಾಗಿದೆ. ಬಾಲಾಸೋರ್ನಲ್ಲಿರುವ ಬ್ಲಡ್ಬ್ಯಾಂಕ್ಗಳಲ್ಲಿ ರಕ್ತ ಸಂಗ್ರಹಣೆ ಮಾಡಲಾಗುತ್ತಿದೆ. ಇದುವರೆಗ 900 ಯೂನಿಟ್ ಸಂಗ್ರಹವಾಗಿದೆ. ನಿನ್ನೆ ರಾತ್ರಿಯೇ ಐದು ನೂರು ಯೂನಿಟ್ ರಕ್ತ ಸಿಕ್ಕಿದೆ ಎಂದು ಒಡಿಶಾ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ ಸುಧಾಂಶು ಸಾರಂಗಿ ತಿಳಿಸಿದ್ದಾರೆ.
ಹಾಗೇ, ಒಡಿಶಾ ವಿಪತ್ತು ಕ್ಷಿಪ್ರ ಪ್ರತಿಕ್ರಿಯಾ ತಂಡ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮತ್ತು ಇತರ ಸೇರಿ ಒಟ್ಟು 14 ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. 200ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳಿವೆ. ಅಗ್ನಿಶಾಮಕ ಸೇವೆಯ ಸಿಬ್ಬಂದಿಯೂ ಶ್ರಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು-ಹೌರಾ ರೈಲಿನಲ್ಲಿದ್ದ, ಕರ್ನಾಟಕದ ಪ್ರಯಾಣಿಕರಿಗಾಗಿ ಸಹಾಯವಾಣಿ ನಂಬರ್
ಕೆ.ಆರ್.ಪುರಂ- 8861203980
ಬಯ್ಯಪ್ಪನಹಳ್ಳಿ- 9606005129
ಕುಪ್ಪಂ- 8431403419
ಬಂಗಾರಪೇಟ್- 08153255253
ಬೆಂಗಳೂರು- 080-22356409