ಬೆಳಗಾವಿ: ಕೊಠಡಿಗಳು ಶಿಥಿಲಗೊಂಡು ತರಗತಿಗಳನ್ನು ನಡೆಸಲು ಸಮಸ್ಯೆಯಾಗಿದ್ದರಿಂದ ಖಾನಾಪುರ ತಾಲೂಕಿನ ಇಟಗಿ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯ ಸಮಸ್ಯೆ ಬಗ್ಗೆ ವಿಸ್ತಾರ ನ್ಯೂಸ್ ವರದಿ ಪ್ರಸಾರ (Vistara Impact) ಮಾಡಿತ್ತು. ವರದಿ ಪ್ರಸಾರವಾದ 3 ಗಂಟೆಗಳಲ್ಲೇ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಶಾಲೆಯ 8 ಕೊಠಡಿಗಳೂ ಶಿಥಿಲಾವಸ್ಥೆ ತಲುಪಿರುವುದರಿಂದ ತರಗತಿಗಳನ್ನು ನಡೆಸಲು ತೊಂದರೆಯಾಗಿತ್ತು. ಹೀಗಾಗಿ ಇಟಗಿ ಸರ್ಕಾರಿ ಶಾಲೆಗೆ ಖಾನಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಯಗನಗೌಡರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಕುಡಚಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೆಲವು ಕೊಠಡಿಗಳಲ್ಲಿ ಚಾವಣಿಯ ಹೆಂಚುಗಳಿಗೆ ಹಾನಿಯಾಗಿದೆ. ಮಳೆಗಾಲದಲ್ಲಿ ಸೋರುವುದರಿಂದ ತರಗತಿಗಳನ್ನು ನಡೆಸಲು ಸಮಸ್ಯೆಯಾಗಿದೆ. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲೆಗೆ ಹೊಸ ಕಟ್ಟಡ ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದ ಅಧಿಕಾರಿಗಳ ತಂಡ, ಕಟ್ಟಡ ಸಮಸ್ಯೆಗೆ ಶೀಘ್ರದಲ್ಲಿಯೇ ತಾತ್ಕಾಲಿಕ ಪರಿಹಾರ ಒದಗಿಸಲಾಗುತ್ತದೆ ಹಾಗೂ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಭರವಸೆ ನೀಡಿದ್ದಾರೆ.