Site icon Vistara News

Rain News | ಮಳೆ ಹಾನಿ ಪರಿಶೀಲನೆಗೆ ಹೋದ ಅಧಿಕಾರಿಗಳು ಪ್ರವಾಹಕ್ಕೆ ಸಿಲುಕಿ ಕಾರಿನ ಮೇಲೆ ನಿಂತರು!

Rain Photo

ಚಾಮರಾಜನಗರ: ಜಿಲ್ಲೆಯಲ್ಲಿ ಮಳೆ ಸುರಿದು ಉಂಟಾದ ಹಾನಿಯ ಪರಿಶೀಲನೆಗೆ ಹೋದ ಅಧಿಕಾರಿಗಳಿಗೇ ಪ್ರವಾಹದ (Rain News) ಸಾಕ್ಷಾತ್‌ ದರ್ಶನವಾಗಿದೆ. ಮಳೆ ಹಾನಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸಮಾನಧಾನ ಮಾಡಲು ಹೋದವರಿಗೆ ರೈತರೇ ಸಮಾಧಾನ ಮಾಡಿ, ಅವರಿಗೆ ಧೈರ್ಯ ತುಂಬಿ ವಾಪಸ್‌ ಕಳುಹಿಸಿದ್ದಾರೆ.

ಮಳೆಯಿಂದ ಉಂಟಾದ ಹಾನಿಯ ಪರಿಶೀಲನೆಗಾಗಿ ಪಿಡಬ್ಲ್ಯೂಡಿ ಎಇಇ ಕಾಂತರಾಜು, ಎಇ ರಾಜು ಅವರು ವಾಹನ ಚಾಲಕ ಮುರುಗೇಶ್‌ ಅವರನ್ನು ಕರೆದುಕೊಂಡು ಗ್ರಾಮಗಳಿಗೆ ತೆರಳಿದ್ದಾರೆ. ಹೀಗೆ ತೆರಳುತ್ತಿದ್ದಾಗ, ಚಾಮರಾಜನಗರ ತಾಲೂಕಿನ ಕಣ್ಣೇಗಾಲ ಹಾಗೂ ಆಲೂರು ನಡುವೆ ಹೊಳೆ ದಾಟುವಾಗ ಏಕಾಏಕಿ ನೀರಿನ ಮಟ್ಟ ಹೆಚ್ಚಾಗಿದೆ. ಆಗ ಕಾರಿನಲ್ಲಿದ್ದ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಿಢೀರನೆ ನೀರಿನ ಮಟ್ಟ ಹೆಚ್ಚಾದ ಕಾರಣ ಕಾರಿನ ಒಳಗೆ ನೀರು ಬಂದಿದೆ. ಇದರಿಂದ ತೀವ್ರವಾಗಿ ವಿಚಲಿತರಾದ ಅಧಿಕಾರಿಗಳು ಕಾರಿನ ಮೇಲೆ ಹತ್ತಿ ನಿಂತಿದ್ದಾರೆ. ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರ ನೆರವಿನಿಂದ ಅಧಿಕಾರಿಗಳು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರು ಕಾರಿಗೆ ಹಗ್ಗ ಕಟ್ಟಿ ಎಳೆದು, ಅಧಿಕಾರಿಗಳಿಗೆ ಸಮಾಧಾನಪಡಿಸಿ ಅವರನ್ನು ವಾಪಸ್‌ ಕಳುಹಿಸಿದ್ದಾರೆ.

ಮದುವೆ ಮಂಟಪಕ್ಕೆ ನುಗ್ಗಿದ ನೀರು

ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದೆ. ನಗರದ ನಂದಿ ಭವನ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದು, ಮದುವೆ ಸಂಭ್ರಮಕ್ಕೆ ಅಡ್ಡಿಯಾಗಿದೆ. ಮದುವೆ ನಡೆಯುತ್ತಿರುವಾಗಲೇ ಅಡುಗೆ ಮನೆ, ಊಟದ ಹಾಲ್‌ಗೆ ನೀರು ನುಗ್ಗಿದೆ. ಮದುವೆಗೆ ಆಗಮಿಸಿದ ಅತಿಥಿಗಳು ವಿಧಿಯಿಲ್ಲದೆ ನೀರು ತುಂಬಿದ ಹಾಲ್‌ನಲ್ಲಿ ಊಟ ಮಾಡಿ ಹೋಗಿದ್ದಾರೆ.

Heavy Rain | ರಾಜ್ಯದಲ್ಲಿ ಮುಂದುವರಿದ ʻಮಳೆ ರಗಳೆʼ; ತ್ವರಿತ ಪರಿಹಾರಕ್ಕೆ ಸಿಎಂ ಬೊಮ್ಮಾಯಿ ಸೂಚನೆ

Exit mobile version