ಬೆಂಗಳೂರು: ಆ್ಯಪ್ ಆಧರಿತ ಆಟೋರಿಕ್ಷಾ ಸೇವೆಯ ದರವನ್ನು ನವೆಂಬರ್ ೨೫ರೊಳಗೆ ಅಂತಿಮಗೊಳಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಈ ಹಿಂದೆ ಹಲವು ಬಾರಿ ಕಾಲಾವಕಾಶ ಕೋರಿದ್ದ ಸರ್ಕಾರ ಈ ಬಾರಿ ನ. 25ರ ಒಳಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ನೀಡುತ್ತಿರುವ ಓಲಾ ಮತ್ತು ಉಬರ್ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವುದನ್ನು ಆಕ್ಷೇಪಿಸಿದ ಸರ್ಕಾರ ತಕ್ಷಣದಿಂದ ಬರುವಂತೆ ಈ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಇತ್ತೀಚೆಗೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ವಜಾಗೊಳಿಸುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್ ಟ್ರಾನ್ಸ್‌ಪೊರ್ಟೇಷನ್ ಸರ್ವೀಸಸ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠವು ಸೋಮವಾರ ನಡೆಸಿತು.
ಈ ವೇಳೆ ಸರ್ಕಾರದ ಪರ ಹಾಜರಾದ ಎಜಿ ಪ್ರಭುಲಿಂಗ ನಾವದಗಿ, ಹೈಕೋರ್ಟ್ ನಿರ್ದೇಶನದಂತೆ ದರ ವಿಚಾರವಾಗಿ ಸಂಬಂಧಿಸಿದ ಎಲ್ಲರ ಅಹವಾಲು ಆಲಿಸಲಾಗಿದೆ. ದರ ನಿಗದಿ ಸಂಬಂಧ ಇದೇ ಶುಕ್ರವಾರದೊಳಗೆ ಸರ್ಕಾರವು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದು, ಅಲ್ಲಿಯವರೆಗೆ ಹೆಚ್ಚುವರಿ ದರ ವಿಧಿಸುವ ಕುರಿತು ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶ ನೀಡಬಾರದು ಎಂದು ಮನವಿ ಮಾಡಿದರು. ಎಜಿಯವರ ಮನವಿಯ ಹಿನ್ನೆಲೆಯಲ್ಲಿ ನ್ಯಾಯಪೀಠವು ವಿಚಾರಣೆಯನ್ನು ನ.28ಕ್ಕೆ ಮುಂದೂಡಿತು.
ಇದನ್ನೂ ಓದಿ | Ola, uber auto| 10% ಹೆಚ್ಚುವರಿ ದರ ಸಾಲದೆಂದ ಓಲಾ, ಉಬರ್: ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಅವಕಾಶ