ಸೊರಬ: “ಪುರಸಭೆ ವಾಣಿಜ್ಯ ಮಳಿಗೆ ಐಡಿಎಸ್‍ಎಂಟಿ ಸೆಲ್ಲಾರ್‌ನಲ್ಲಿ ಸಂಗ್ರಹಿಸಿಡಲಾಗಿದ್ದ ಹಳೇ ತಾಲೂಕು ಕಚೇರಿಯ ಹಳೇ ನಾಟ (Old Nata) ಸಾಗಾಟಕ್ಕೂ ತಮಗೂ ಮತ್ತು ಪುರಸಭೆ ಸದಸ್ಯರಿಗೂ ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ ಸ್ಪಷ್ಟಪಡಿಸಿದರು.
ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪುರಸಭೆಯ 2022-23ನೇ ಸಾಲಿನ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳೇ ನಾಟ ಸಾಗಾಟ ಕುರಿತಂತೆ ಸದಸ್ಯೆಯರಾದ ಅಫ್ರಿನ್ ಮೆಹಬೂಬ್ ಬಾಷಾ ಮತ್ತು ಜಯಲಕ್ಷ್ಮೀ ಮಾತನಾಡಿ, “ಪುರಸಭೆ ಮುಂಭಾಗದ ವಾಣಿಜ್ಯ ಸಂಕೀರ್ಣದ ಕೊಠಡಿಯಲ್ಲಿ ಬೆಲೆ ಬಾಳುವ ಹಳೇ ನಾಟಾಗಳನ್ನು ಸದಸ್ಯರ ಗಮನಕ್ಕೆ ತರದೇ ನಿಯಮ ಬಾಹಿರವಾಗಿ ಸಾಗಿಸಲಾಗಿದ್ದು, ಸಾರ್ವಜನಿಕರು ಪುರಸಭೆ ಸದಸ್ಯರ ಮೇಲೆ ಬೊಟ್ಟು ಮಾಡಿ ತೋರಿಸುವಂತಾಗಿದೆ. ಇದಕ್ಕೆ ಅಧ್ಯಕ್ಷರು ಸಮಗ್ರವಾಗಿ ಉತ್ತರಿಸುವಂತೆ ಪಟ್ಟು ಹಿಡಿದರು. ಇದಕ್ಕೆ ಸಭೆಯಲ್ಲಿದ್ದ ಕೆಲ ಸದಸ್ಯರು ಧ್ವನಿಗೂಡಿಸಿದರು.
ಅಧ್ಯಕ್ಷ ಈರೇಶ್ ಮೇಸ್ತ್ರಿ ಮಧ್ಯ ಪ್ರವೇಶಿಸಿ ಮಾತನಾಡಿ, “ಈ ಹಿಂದೆ ಅಂದರೆ 2019ರಲ್ಲಿ ತೆರವುಗೊಳಿಸಿದ್ದ ಹಳೇ ತಾಲೂಕು ಕಚೇರಿಯ ಸಾಗುವಾನಿ ಸೇರಿದಂತೆ ವಿವಿಧ ಜಾತಿಯ ಹಳೇ ನಾಟಾಗಳನ್ನು ಅಂದಿನ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ ಪಂಚನಾಮೆ ಮಾಡಿ ಪುರಸಭೆ ಮುಂಭಾಗದಲ್ಲಿನ ಐಡಿಎಸ್‍ಎಂಟಿ ವಾಣಿಜ್ಯ ಮಳಿಗೆಯ ಸೆಲ್ಲಾರ್‌ನಲ್ಲಿ ಇಡಲಾಗಿತ್ತು. ಆದರೆ, ಬೇರೆಡೆ ಸಾಗಿಸುವ ಪೂರ್ವದಲ್ಲಿ ನನಗಾಗಲೀ ಅಥವಾ ಉಪಾಧ್ಯಕ್ಷರ ಗಮನಕ್ಕೂ ತಾರದೇ ಮುಖ್ಯಾಧಿಕಾರಿಗಳು ಸೆಲ್ಲಾರ್‌ನ ಬೀಗದ ಕೀಯನ್ನು ನೀಡಿದ್ದಾರೆ. ಅದರಲ್ಲೇನಾದರೂ ಕಳ್ಳತನವಾಗಲೀ ಅಥವಾ ಅವ್ಯವಹಾರ ನಡೆದಲ್ಲಿ ಮುಖ್ಯಾಧಿಕಾರಿಗಳೇ ನೇರೆ ಹೊಣೆಯೇ ಹೊರತು ತಾವು, ಉಪಾಧ್ಯಕ್ಷರು ಮತ್ತು ಸದಸ್ಯರಾಗಲೀ ಅಲ್ಲ” ಎಂದು ಸ್ಪಷ್ಟಪಡಿಸಿದರು.
ಟ್ರಾಫಿಕ್ ಕಿರಿಕಿರಿ ಪ್ರಸ್ತಾಪ
ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದವರೆಗೆ ಪಾರ್ಕಿಂಗ್ ವ್ಯವಸ್ಥೆಗಾಗಿ ನಾಮಫಲಕ ಅಳವಡಿಕೆ, ಸಾಗರ ರಸ್ತೆ ಆಜುಬಾಜು ವಾಹನ ಗ್ಯಾರೇಜ್‍ಗಳಿದ್ದು ರಸ್ತೆ ಬದಿಯಲ್ಲಿ ರಿಪೇರಿಯ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರರಿಗೆ ತೊಂದರೆಯಾಗುತ್ತದೆ. ಸಂಚಾರಕ್ಕೆ ಕಿರಿಕಿರಿಯಾಗುತ್ತದೆ. ಈ ಕಾರಣ ಅಂಥ ಗ್ಯಾರೇಜ್ ಮಾಲೀಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಇಲ್ಲದಿದ್ದರೆ ಅವರ ಮೇಲೆ ಕ್ರಮ ಜರುಗಿಸುವಂತೆ ಸಭೆಯಲ್ಲಿದ್ದ ಪಿಎಸ್‍ಐ ನಾಗರಾಜ್ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು.
ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಆಯ್ದ ಜಾಗಗಳಲ್ಲಿ ಗುಣಮಟ್ಟದ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವುದು. ಪುರಸಭೆ ವ್ಯಾಪ್ತಿಗೊಳಪಡುವ ಪ್ರಮುಖ ವೃತ್ತಗಳಾದ ಹೊಸಪೇಟೆ ಬಡಾವಣೆಯ ಹೊಸಬಾಳೆ ವೃತ್ತ, ಆನವಟ್ಟಿ ವೃತ್ತ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮುಂಭಾಗದಿಂದ ಹಾದು ಹೋಗುವ ವೃತ್ತ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ವೃತ್ತ, ಪುರಸಭೆ ಮುಂಭಾಗದ ವೃತ್ತ, ಉದ್ರಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಮತ್ತು ಮುಖ್ಯ ರಸ್ತೆಯಲ್ಲಿ ವಾಹನಗಳ ವೇಗ ಚಾಲನೆ ನಿಯಂತ್ರಣಕ್ಕಾಗಿ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸಭೆಯಲ್ಲಿದ್ದ ಸದಸ್ಯರ ಸಲಹೆ ಪಡೆದು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಇದನ್ನೂ ಓದಿ: ದೆಹಲಿ ಮತ್ತು 3 ರಾಜ್ಯಗಳಲ್ಲಿ ಅಧ್ಯಕ್ಷರನ್ನು ಬದಲಾವಣೆ ಮಾಡಿದ ಬಿಜೆಪಿ; ಒಳಜಗಳ ಶಮನ, ಚುನಾವಣಾ ಸಿದ್ಧತೆಗೆ ಆದ್ಯತೆ
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಮಧುರಾಯ ಜಿ. ಶೇಟ್, ಸದಸ್ಯರಾದ ಎಂ.ಡಿ. ಉಮೇಶ್, ಅಫ್ರಿನ್, ಜಯಲಕ್ಷ್ಮೀ, ಪ್ರೇಮಾ ಟೋಕಪ್ಪ, ಯು. ನಟರಾಜ್, ಅನ್ಸರ್ ಅಹ್ಮದ್, ಶ್ರೀ ರಂಜಿನಿ ಪ್ರವೀಣ್ ಕುಮಾರ್, ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್, ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ, ಪರಿಸರ ಅಭಿಯಂತರ ಚಂದನ್, ಕಿರಿಯ ಅಭಿಯಂತರ ಹರೀಶ್ ಕುಮಾರ್, ಕಂದಾಯ ನಿರೀಕ್ಷಕ ಜಿ. ವಿನಾಯಕ, ಪ್ರಥಮ ದರ್ಜೆ ಸಹಾಯಕ ಆಂಜನೇಯ, ಪಿಎಸ್‍ಐ ನಾಗರಾಜ್ ಇದ್ದರು.