ಬಾಗಲಕೋಟೆ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪಿಂಚಣಿ ಸಮಸ್ಯೆಯನ್ನು ಬಗೆಹರಿಸುವ (Old Pension) ಕುರಿತು ತೀರ್ಮಾನ ಮಾಡಲಾಗುವುದೆಂದು ತಿಳಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಳೇ ಪಿಂಚಣಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೆಮಠ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಇದೇ ವೇಳೆ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ಧನಸಹಾಯ ಮಾಡಿದರು. ಈ ವೇಳೆ ಮಾತನಾಡಿದ ಅವರು 2006ರಲ್ಲಿ ಹೊಸ ಪಿಂಚಣಿ ಸ್ಕೀಮ್ ಜಾರಿಗೆ ಬಂದಿತ್ತು. ಇದನ್ನು ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದ್ದು, ಅವರು ಮಾಡಿದ್ದನ್ನು ರಾಜ್ಯ ಸರ್ಕಾರ ಮಾಡುತ್ತದೆ. ಸ್ಕೀಮ್ ಈ ಬಗ್ಗೆ ಪರಿಶೀಲಿಸಲು ಹೇಳಿದ್ದೇವೆ ಎಂದರು.
ಜತೆಗೆ ಈಗ ನಮ್ಮ ಪಕ್ಷ ಸರ್ಕಾರದಲ್ಲಿ ಇಲ್ಲ, ಮುಂದೆ ಅಧಿಕಾರಕ್ಕೆ ಬಂದರೆ ಪಿಂಚಣಿ ಸಮಸ್ಯೆ ಬಗ್ಗೆ ಬಗೆಹರಿಸುವ ತೀರ್ಮಾನ ಮಾಡಲಾಗುವುದು. ಸದ್ಯಕ್ಕೆ ಅಧಿಕಾರದ ಗದ್ದುಗೆಯಲ್ಲಿ ಇರುವವರು ಬಸವರಾಜ ಬೊಮ್ಮಾಯಿ, ಅವರು ಈ ಬಗ್ಗೆ ತೀರ್ಮಾನವನ್ನು ಮಾಡಬೇಕು ಎಂದರು.
ಏನಿದು ಘಟನೆ?
ಪಿಂಚಣಿಗಾಗಿ ಆಗ್ರಹಿಸಿ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರ ಸಂಘದವರು 140 ದಿನಗಳಿಗೂ ಹೆಚ್ಚು ಕಾಲ ಫ್ರೀಡಂ ಪಾರ್ಕ್ ಬಳಿ ಸತ್ಯಾಗ್ರಹ ನಡೆಸುತ್ತಿದ್ದರು. ಆದರೆ, ಇದಕ್ಕೆ ಸ್ಪಂದನ ಸಿಗದ ಕಾರಣಕ್ಕೆ ಮನನೊಂದು ಇಬ್ಬರು ನಿವೃತ್ತ ಶಿಕ್ಷಕರು ಆತ್ಮಹತ್ಯೆಗೆ ಯತ್ನಿಸಿದ್ದರು. ಬಾದಾಮಿಯ ಪಟ್ಟದಕಲ್ಲಿನ ಸಿದ್ದಯ್ಯ ಹೀರೆಮಠ (65) ವಿಷ ಸೇವಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ