ವಿಜಯಕುಮಾರ ನಾಯ್ಕ, ವಿಸ್ತಾರ ನ್ಯೂಸ್
ಯಲ್ಲಾಪುರ: ಯಲ್ಲಾಪುರದ ಹಳೆಯ ತಹಸೀಲ್ದಾರ್ ಕಚೇರಿಯು ಸೂಕ್ತ ನಿರ್ವಹಣೆಯಿಲ್ಲದೆ ಕಸದ ಕೊಂಪೆಯಾಗಿ ರೂಪುಗೊಂಡಿದೆ.
ಇತ್ತೀಚೆಗೆ ಆರಂಭಗೊಂಡ ನೂತನ ತಾಲೂಕಾ ಆಡಳಿತಸೌಧದ ಪರಿಣಾಮವಾಗಿ ತಾಲೂಕಾಡಳಿತವು ತನ್ನ ಹಳೆಯ ಕಟ್ಟಡವನ್ನು ಪಾಳು ಕೊಂಪೆಯಾಗಿಸುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಕೇವಲ ಸೋರುತ್ತಿದೆ ಎನ್ನುವ ಕಾರಣಕ್ಕೆ ಹೊಸ ಕಟ್ಟಡವನ್ನು ಕಂಡ ಯಲ್ಲಾಪುರದ ಹಳೆ ತಹಸೀಲ್ದಾರ್ ಕಚೇರಿಯು ಈಗ ನಿರ್ವಹಣೆಯಿಲ್ಲದೆ ಕಸದ ಕೊಂಪೆಯಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ಆರಂಭಗೊಂಡಿದ್ದ ಪಟ್ಟಣದ ಬೆಲ್ ರಸ್ತೆಯ ತಹಸೀಲ್ದಾರ್ ಕಟ್ಟಡವು ಸರ್ಕಾರಿ ಕಚೇರಿಗಳಲ್ಲಿ ಅತಿ ದೊಡ್ಡ ಕಟ್ಟಡ ಎಂದು ಗುರುತಿಸಲ್ಪಟ್ಟಿತ್ತು. ನಂತರದ ದಿನಗಳಲ್ಲಿ ಈ ಕಟ್ಟಡದ ಚಾವಣಿ ಸೋರತೊಡಗಿದ್ದರಿಂದ, ಕೆಲವೊಂದು ಇಲಾಖೆಗಳ ಕೆಲಸಗಳಿಗೆ ಅಡ್ಡಿಯಾಗತೊಡಗಿತು. ಇದರಿಂದಾಗಿ ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಂದಾಯ ಇಲಾಖೆಯ ಜಾಗದಲ್ಲಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಹಸೀಲ್ದಾರ್ ಕಚೇರಿ ಕಟ್ಟಡ ನಿರ್ಮಾಣಗೊಂಡು, ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ಕಾರ್ಯಾರಂಭಗೊಂಡಿತು. ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಕಚೇರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರವಾದವು.
ಇದನ್ನೂ ಓದಿ: Vijayanagara News: ಒಂದೇ ದಿನ ಆರು ದೇವಸ್ಥಾನಗಳಲ್ಲಿ ಕಳ್ಳತನ
ಆಹಾರ ಇಲಾಖೆ, ಅಬಕಾರಿ ಇಲಾಖೆ, ಉಪ ನೋಂದಣಾಧಿಕಾರಿಗಳ ಕಚೇರಿ, ಸರ್ವೆ ಇಲಾಖೆ, ಆಧಾರ್ ಸೇವಾ ಕೇಂದ್ರ, ರೆಕಾರ್ಡ್ ರೂಮ್‌ಗಳು ಈಗಲೂ ಸಹ ಹಳೆಯ ಕಚೇರಿಯಲ್ಲಿಯೇ ಮುಂದುವರಿದಿದ್ದು, ತಾಲೂಕಾಡಳಿತ ಇವುಗಳನ್ನು ಮರೆತು ನಿರ್ವಹಣೆ ಮಾಡದಿರುವುದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ.
ಗೋಡೆಗಳ ಮೂಲೆಗಳಲ್ಲಿ ಎಲೆ ಅಡಿಕೆ, ಗುಟ್ಕಾ ತಿಂದು ಉಗಿದು ಕೊಳಕು ಮಾಡಿರುವುದು ಒಂದೆಡೆಯಾದರೆ, ಅಲ್ಲಲ್ಲಿ ತಿಂದು ಒಗೆದ ತಿಂಡಿಯ ಪ್ಲಾಸ್ಟಿಕ್ ಪ್ಯಾಕ್ ಹಾಗೂ ನೀರಿನ ಬಾಟಲ್‌ಗಳು. ಮತ್ತೊಂದೆಡೆ ತಿಂಗಳಾದರೂ ಗುಡಿಸದೆ ಧೂಳು ಆವರಿಸಿದ ನೆಲ. ಹೊರಭಾಗದಲ್ಲಿ ಈಗಲೋ ಆಗಲೋ ಬೀಳಬಹುದು ಎನ್ನುವ ಪರಿಸ್ಥಿತಿಯಲ್ಲಿರುವ ಫಲಕಗಳು ಕಾಣುತ್ತವೆ.
ಈಗಲೂ ಸಹ ಸುಮಾರು ಶೇ.60ರಷ್ಟು ಕಚೇರಿಗಳು ಹಳೆಯ ಕಟ್ಟಡದಲ್ಲೇ ಇದ್ದು, ಪ್ರತಿನಿತ್ಯ ನೂರಾರು ಜನರು ತಮ್ಮ ಕಾರ್ಯಗಳಿಗಾಗಿ ಈ ಕಟ್ಟಡಕ್ಕೆ ಆಗಮಿಸುತ್ತಾರೆ. ಇದೇ ಹಳೆಯ ಕಟ್ಟಡದ ಚಾವಣಿ ಸರಿಪಡಿಸಿ, ಸಣ್ಣ ಪುಟ್ಟ ದುರಸ್ತಿ ಮಾಡಿಸಿದರೆ, ಸಣ್ಣಪುಟ್ಟ ಇಲಾಖೆಗಳ ಅಥವಾ ಅರೆ ಸರ್ಕಾರಿ ಸಂಘ ಸಂಸ್ಥೆಗಳ ಬಳಕೆಗೆ ನೀಡಬಹುದಾಗಿದೆ. ಈ ಕುರಿತು ತಾಲೂಕಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Railway Bridge Collapse : ಕಾರ್ಮಿಕರ ಮೇಲೆ ಕುಸಿದ ರೈಲ್ವೆ ಸೇತುವೆ; ಭೀಕರ ದುರಂತ
ಕಾರ್ಯದ ನಿಮಿತ್ತ ತಾಲೂಕು ಕಚೇರಿಗೆ ಬಂದ ನನಗೆ ಇಲ್ಲಿಯ ಪರಿಸ್ಥಿತಿಯನ್ನು ಕಂಡು ಆಘಾತವಾಯಿತು. ಸ್ವಚ್ಛತೆಯನ್ನು ಕಾಣದೇ ಅದೆಷ್ಟು ದಿನಗಳಾಗಿವೆಯೋ ಎಂಬಂತಿದೆ. ಸರ್ಕಾರದ ಕಚೇರಿಯ ಒಳಗೆ ಈ ರೀತಿಯ ಪರಿಸ್ಥಿತಿಯಾದರೆ ಹೇಗೆ ಎನ್ನುವುದು ಪ್ರಶ್ನೆಯಾಗಿದೆ.
–ಜಗದೀಶ ಬಾಳೆಹದ್ದ, ಸ್ಥಳೀಯ ನಿವಾಸಿ
ಹೊಸ ಕಟ್ಟಡದಲ್ಲಿ ಕೆಲ ತಾಂತ್ರಿಕ ಕೆಲಸಗಳು ಬಾಕಿ ಇದ್ದು, ಅದು ಸಂಪೂರ್ಣಗೊಂಡ ನಂತರ ಎಲ್ಲ ಇಲಾಖೆಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಅದಾದ ನಂತರ ಈ ಕಟ್ಟಡವನ್ನು ಅಗತ್ಯವಿರುವ ಇಲಾಖೆಗೆ ಹಸ್ತಾಂತರಿಸಿ, ನಿರ್ವಹಣೆಯ ಜವಾಬ್ದಾರಿ ವಹಿಸಲಾಗುವುದು.
–ಗುರುರಾಜ್ ಎಂ, ತಹಸೀಲ್ದಾರರು