Site icon Vistara News

ಆರ್ಥಿಕ ನೆರವಿಗಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಂದ ಆ.15ಕ್ಕೆ ಸಿಎಂ ಮನೆ ಮುತ್ತಿಗೆಗೆ ನಿರ್ಧಾರ

ಹಾವೇರಿ: ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ನೆರವಿಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ಆ.೧5ರಂದು ಶಿಗ್ಗಾಂವಿಯ ಮುಖ್ಯಮಂತ್ರಿಗಳ ನಿವಾಸದ ಎದುರು ಮಹಿಳೆಯರು ಪ್ರತಿಭಟನೆಗೆ ನಿರ್ಧರಿಸಿದ್ದು, ಸಮಸ್ಯೆಯನ್ನು ಶೀಘ್ರದಲ್ಲೇ ಇತ್ಯರ್ಥಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಜಿಲ್ಲಾಧಿಕಾರಿ ‌ಸಂಜಯ ಶೆಟ್ಟಣ್ಣನವರ ಪತ್ರ ಬರೆದಿದ್ದಾರೆ.

ಏಪ್ರಿಲ್‌ 24ರಂದು ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸುವ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಆರ್ಥಿಕ ಪ್ಯಾಕೇಜ್ ನೆರವು ಘೋಷಿಸಲು ಒತ್ತಾಯಿಸಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ಆ.೧೩ರಿಂದ ಮತ್ತೊಮ್ಮೆ ನೆಲಗೊಲ್ಲ ಗ್ರಾಮದಿಂದ ಪಾದಯಾತ್ರೆ ಮಾಡಲು ನಿರ್ಧರಿಸಿದ್ದು, ಆ.೧೫ರಂದು ಶಿಗ್ಗಾಂವಿಯ ಮುಖ್ಯಮಂತ್ರಿಗಳ ನಿವಾಸದೆದುರು ಧ್ವಜಾರೋಹಣ ಮಾಡಿ ʼನಮ್ಮ ಹಕ್ಕು ನಮ್ಮ ನ್ಯಾಯʼ ಎಂಬ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಶೀಘ್ರವಾಗಿ ಪರಿಹರಿಸುವಂತೆ ಪತ್ರದಲ್ಲಿ ಡಿಸಿ ಮನವಿ ಮಾಡಿದ್ದಾರೆ.

ಈ ಹಿಂದೆ ನೂರಾರು ಮಹಿಳೆಯರು ರಾಣೆಬೆನ್ನೂರಿನಿಂದ ಶಿಗ್ಗಾಂವಿಯ ಸಿಎಂ ಮನೆವರೆಗೆ ಜಾಥಾ ತೆರಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು. ಆಗ ಅಧಿಕಾರಿಗಳು ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದ್ದರಿಂದ ಮಹಿಳೆಯರು ಪ್ರತಿಭಟನೆ ಕೈಬಿಟ್ಟಿದ್ದರು. ಆದರೆ, ಇದುವರೆಗೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತೊಮ್ಮೆ ಪ್ರತಿಭಟನೆಗೆ ಮುಂದಾಗಿದ್ದು, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಇದನ್ನು ಓದಿ | Amit Shah in state | ಪ್ರವೀಣ್‌ ನೆಟ್ಟಾರು ಹತ್ಯೆ, ಪ್ರತಿಭಟನೆಗಳಿಂದ ಬಿಜೆಪಿಗೆ ಭಾರಿ ಡ್ಯಾಮೇಜ್‌, ಅಮಿತ್‌ ಶಾ ಕಿಡಿ

Exit mobile version