ಬೆಂಗಳೂರು: ಮೇರು ನಟ ಡಾ. ವಿಷ್ಣುವರ್ಧನ್ ಅವರ (Dr Vishnuvardhan) ಪುಣ್ಯಭೂಮಿಯನ್ನು ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಡಿ. 17 ರಂದು ಬೃಹತ್ ಪ್ರತಿಭಟನೆ ನಡೆಸಲು ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟ ಮುಂದಾಗಿದೆ. ಈ ಬಗ್ಗೆ ಒಕ್ಕೂಟದ ಮುಖಂಡ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮೇರು ನಟ ಡಾ. ವಿಷ್ಣುವರ್ಧನ್ ಅವರು ನಮ್ಮನ್ನಗಲಿ 14 ವರ್ಷಗಳಾದವು. ಆದರೆ ಇಂದಿಗೂ ಅವರ ಅಂತ್ಯಸಂಸ್ಕಾರಗೊಂಡ ಜಾಗವನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಯಾವುದೇ ಸರ್ಕಾರ ಮಾಡಿಲ್ಲ. ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಡಿಸೆಂಬರ್ 17 ರಂದು ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ 10 ರಿಂದ ಸಂಜೆ 6ಗಂಟೆವರೆಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ನಾಡಿನ ಎಲ್ಲಾ ಕನ್ನಡಪರ ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ಆದಿಯಾಗಿ ಡಾ.ವಿಷ್ಣುವರ್ಧನ್ ಅವರ ಒಡನಾಡಿಗಳೆಲ್ಲರೂ ಭಾಗವಹಿಸಲಿದ್ದಾರೆ. ಅಂದು ಸುಮಾರು ಐವತ್ತು ಸಾವಿರ ಜನ ಸೇರುವ ನಿರೀಕ್ಷೆ ಇದೆ. ಒಂದು ವೇಳೆ ಈ ಪ್ರತಿಭಟನೆಗೂ ಸರ್ಕಾರ ಸ್ಪಂದಿಸದೇ ಹೋದಲ್ಲಿ, ದೆಹಲಿಯಲ್ಲಿ ನಾವು ಹೋರಾಟವನ್ನು ಮುಂದುವರಿಸಲಿದ್ದೇವೆ ಜತೆಗೆ ಸರ್ಕಾರದ ಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪುಬಾವುಟ ಪ್ರದರ್ಶನಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Actress Leelavathi: ಲೀಲಾವತಿ ಕನಸಿನ ಪಶು ಆಸ್ಪತ್ರೆ ಉದ್ಘಾಟಿಸಿದ ಡಿಕೆಶಿ, ಆದರೆ ನಟಿ ಪ್ರಜ್ಞಾಶೂನ್ಯ
ವಾಸ್ತವದಲ್ಲಿ ಹಿರಿಯ ಕಲಾವಿದ ಬಾಲಕೃಷ್ಣ ಅವರಿಗೆ ಸರ್ಕಾರ ಅನುದಾನವಾಗಿ ನೀಡಿರುವ ಜಾಗವೇ ಅಭಿಮಾನ್ ಸ್ಟುಡಿಯೋ. ಕನ್ನಡಿಗರು ಚಿತ್ರರಂಗದ ಕೆಲಸಗಳಿಗೆ ಮದ್ರಾಸ್‌ಗೆ ಹೋಗುವುದನ್ನು ತಪ್ಪಿಸಬೇಕು ಎಂದು ಕನಸು ಹೊತ್ತು ಬಾಲಣ್ಣನವರು ಸರ್ಕಾರದ ಬಳಿ ಇಪ್ಪತ್ತು ಎಕರೆ ಜಾಗವನ್ನು 99 ವರುಷಕ್ಕೆ ಅನುದಾನವಾಗಿ ಪಡೆದು ಅಭಿಮಾನ್ ಸ್ಟುಡಿಯೋ ನಿರ್ಮಿಸಿದ್ದರು. ಆದರೆ ಅವರ ಅಗಲಿಕೆಯ ನಂತರ 2004ರಲ್ಲಿ ಅವರ ಮಕ್ಕಳು ಅದರಲ್ಲಿ ಹತ್ತು ಎಕರೆ ಜಾಗವನ್ನು ಮಾರಾಟ ಮಾಡಿ, ಸರ್ಕಾರಿ ಜಮೀನನ್ನು ದುರುಪಯೋಗಪಡಿಸಿಕೊಂಡಿದ್ದರು. ಈ ಕಾರಣದಿಂದ ಹಿಂದಿನ ಜಿಲ್ಲಾಧಿಕಾರಿ ಶಂಕರ್ ಅವರು ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಆದೇಶಿಸಿದ್ದರು. ಆಗ ಬಾಲಕೃಷ್ಣ ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತಂದಿದ್ದರು ಎಂದು ವಿಷ್ಣುವರ್ಧನ ಅಭಿಮಾನಿ ಸಂಘಗಳ ಒಕ್ಕೂಟ ಹೇಳಿದೆ.
ಈ ನಡುವೆ, ಡಾ.ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿಗೆ ಸ್ಥಳಾಂತರಗೊಂಡಿತು. ಆದರೆ ಅಭಿಮಾನಿಗಳು ಸ್ಮಾರಕ ಎಲ್ಲೇ ಆದರೂ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ ಪುಣ್ಯಭೂಮಿ ಇರಬೇಕು ಎಂದು ಹಠವಿಡಿದು, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ಅತ್ಯಂತ ಅದ್ಧೂರಿಯಾಗಿ ಅಭಿಮಾನ್ ಸ್ಟುಡಿಯೋದ ಡಾ.ವಿಷ್ಣು ಪುಣ್ಯಭೂಮಿಯಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ.
ಇದನ್ನೂ ಓದಿ | Actress Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿ ಭಾವುಕರಾದ ಶಿವ ರಾಜ್‌ಕುಮಾರ್
ಆದರೆ, ಈಗ ಅಭಿಮಾನ್ ಸ್ಟುಡಿಯೋದ ಮಾಲೀಕರು ಅಭಿಮಾನಿಗಳಿಗೆ ಒಳಪ್ರವೇಶಿಸಲು ನಿರ್ಬಂಧಗಳನ್ನು ವಿಧಿಸುವುದರ ಜತೆಗೆ, ಪ್ರತಿವರ್ಷದ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಗೆ ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ. ಈ ಕುರಿತಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿಮಾಡಿ ಅಹವಾಲನ್ನು ಸಲ್ಲಿಸಲಾಗಿದೆ. ಒಬ ನಟನಿಗೇ ಎರಡು ಕಡೆ ಸ್ಮಾರಕ, ಪುಣ್ಯಭೂಮಿ ಮಾಡುವುದು ಸರ್ಕಾರಕ್ಕೆ ಕಷ್ಟವಾದರೆ, ಆ ಜಮೀನಿಗೆ ತಗಲುವ ಮತ್ತು ಪುಣ್ಯಭೂಮಿ ಅಭಿವೃದ್ಧಿಗೆ ಬೇಕಾಗುವ ಹಣವನ್ನು ಅಭಿಮಾನಿಗಳೇ ನೀಡುವುದಾಗಿ ತಿಳಿಸಿರುತ್ತೇವೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.