Site icon Vistara News

ಲಾಲ್ ಬಾಗ್‌ನಲ್ಲಿ ʼದೇಶದ ಹೆಸರಿನಲ್ಲಿ ಒಂದು ಗಿಡʼ ಮಹಾ ಅಭಿಯಾನಕ್ಕೆ ಚಾಲನೆ

ದೇಶದ ಹೆಸರಿನಲ್ಲಿ ಒಂದು ಗಿಡ

ಬೆಂಗಳೂರು: ಪರ್ಯಾವರಣ ಸಂರಕ್ಷಣ ಗತಿವಿಧಿ ವತಿಯಿಂದ ಜನವರಿ 12 ರಿಂದ 16ರವರೆಗೆ ʼದೇಶದ ಹೆಸರಿನಲ್ಲಿ ಒಂದು ಗಿಡʼ ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ವಿವೇಕಾನಂದ ಜಯಂತಿ ದಿನದಂದು (ಗುರುವಾರ) ನಗರದ ಲಾಲ್ ಬಾಗ್‌ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಯೋಜಕರಾದ ಜಯರಾಮ ಬೊಳ್ಳಾಜೆ ಮತ್ತು ವೆಂಕಟೇಶ ಸಂಗನಾಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಖಾಲಿ ಹಾಲಿನ ಕವರ್‌ಗಳನ್ನು ಮರುಬಳಕೆ ಮಾಡಿ ಅವುಗಳಲ್ಲಿ ಮಣ್ಣು ಹಾಕಿ ಬೀಜ ಬಿತ್ತಲಾಯಿತು.

ಪ್ರತಿಯೊಬ್ಬರೂ ಮನೆಗಳಲ್ಲಿ ಉಪಲಬ್ಧವಿರುವ ಬೀಜಗಳನ್ನು ಬಿತ್ತಿ, ಸಸಿ ಮಾಡಿ ಗಿಡ ನೆಡುವ ಯೋಜನೆ ಇದಾಗಿದ್ದು, ಈ ಮೂಲಕ ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಮೂಡಿಸುವುದೇ ಇದರ ಧ್ಯೇಯವಾಗಿದೆ. ಪ್ರತಿ ಮನೆಯಲ್ಲೂ ಅವರ ಸ್ಥಳ ಉಪಲಬ್ದತೆಗೆ ಅನುಸಾರವಾಗಿ ಬೀಜಗಳನ್ನು ಬಿತ್ತನೆ ಮಾಡಬಹುದಾಗಿದೆ. ಬೀಜ ಸಸಿಯಾದ ನಂತರ ದೇಶದ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣಾ ಕಾರ್ಯ ಮಾಡುವ ಮಹಾ ಧ್ಯೇಯದೊಂದಿಗೆ ಅಭಿಯಾನವನ್ನು ಆರಂಭಿಸಲಾಗಿದೆ. ದೇಶಾದ್ಯಂತ ಏಕ ಕಾಲದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ನಡೆಯುವ ಅಭಿಯಾನಕ್ಕೆ ವಿಸ್ತಾರ ನ್ಯೂಸ್ ಹಾಗೂ ಮತ್ತಿತರ ಸಂಘ-ಸಂಸ್ಥೆಗಳು ಸಹಯೋಗ ನೀಡಿವೆ.

ಸ್ವಚ್ಛತಾ ಕಾರ್ಯ
ಇದೇ ಸಂದರ್ಭದಲ್ಲಿ ಪರ್ಯಾವರಣ ಸಂರಕ್ಷಣ ಗತಿವಿಧಿ ಸ್ವಯಂ ಸೇವಕರು ಮತ್ತು ಕೆಲವು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಲಾಲ್ ಬಾಗ್ ಆವರಣದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡಿದರು.

ಇದನ್ನೂ ಓದಿ | ದೇಶದ ಹೆಸರಿನಲ್ಲಿ ಒಂದು ಗಿಡ | ಪ್ರತಿಯೊಬ್ಬರು ಒಂದು ಗಿಡ ನೆಡುತ್ತೇವೆ ಎಂದು ಸಂಕಲ್ಪ ಮಾಡಿದರೆ ಇಡೀ ದೇಶವೇ ನಂದನವನ

Exit mobile version