Site icon Vistara News

Escom Online Services: ಮಾ.10 ರಿಂದ ಹತ್ತು ದಿನ ಎಸ್ಕಾಂಗಳ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯ

Bescom website

ಬೆಂಗಳೂರು: ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಹಿನ್ನೆಲೆಯಲ್ಲಿ ಮಾರ್ಚ್ 10 ರಿಂದ 19 ರವರೆಗೆ ಒಟ್ಟು ಹತ್ತು ದಿನಗಳ ಕಾಲ ರಾಜ್ಯದ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆಗಳು (Escom Online Services)ನಗರ ಪ್ರದೇಶದ (RAPDRP) ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ಇಂಧನ ಇಲಾಖೆ ತಿಳಿಸಿದೆ.

ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು ಹತ್ತು ದಿನಗಳ ಕಾಲ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿದಂತೆ ಯಾವುದೇ ಆನ್ ಲೈನ್ ಸೇವೆಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ. ಆನ್‌ಲೈನ್ ಸೇವೆಗಳು ಮಾತ್ರವೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತವೆಯೇ ಹೊರತು ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಆಗಲಿ, ಕಡಿತವಾಗಲಿ ಮಾಡುವುದಿಲ್ಲ.
ತಂತ್ರಾಂಶವು ಕಾರ್ಯಾರಂಭಗೊಂಡ ನಂತರ ಸ್ಥಿರಗೊಳ್ಳಲು ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಬಹುದು ಎಂದು ಮಾಹಿತಿ ನೀಡಿದೆ.

ಸಾಫ್ಟ್‌ವೇರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗದ ಕಾರಣ, ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ ಮಾಪಕ ಓದುಗರು ಗ್ರಾಹಕರಿಗೆ ಬಿಲ್‌ಗಳನ್ನು ನೀಡಲಿದ್ದಾರೆ, ಆದರೆ ಈ ಬಿಲ್‌ಗಳನ್ನು ಮಾರ್ಚ್ 20 ರ ನಂತರವೇ ತಂತ್ರಾಂಶದಲ್ಲಿ ಅಪಲೋಡ್ ಮಾಡಲು ಸಾಧ್ಯವಾಗಲಿದೆ ಎಂದು ಇಂಧನ ಇಲಾಖೆ ತಿಳಿಸಿದೆ.

ವಿದ್ಯುತ್ ಸರಬರಾಜು ಕಂಪನಿಗಳ ಯಾವ ನಗರಗಳಲ್ಲಿ ಆನ್‌ಲೈನ್ ಸೇವೆ ಇರುವುದಿಲ್ಲ

ಬೆಸ್ಕಾಂ: ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು ಹಾಗೂ ಗೌರಿಬಿದನೂರು.

ಸೆಸ್ಕ್: ಮೈಸೂರು, ಮಳವಳ್ಳಿ, ನಂಜನಗೂಡು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ ಆ‌ರ್ ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೆಗಾಲ, ಹಾಸನ ಹಾಗೂ ಚನ್ನರಾಯಪಟ್ಟಣ.

ಮೆಸ್ಕಾಂ: ಮಂಗಳೂರು, ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು.

ಜೆಸ್ಕಾಂ: ಗುಲ್ಬರ್ಗ, ಮಾನ್ವಿ, ಸಿಂಧನೂರು, ಬೀದರ್, ಗಂಗಾವತಿ, ಸೇಡಂ, ಬಸವಕಲ್ಯಾಣ, ವಾಡಿ, ಅಲನಾಡ್, ಭಾಲ್ಕಿ, ಶಹಾಬಾದ್, ಶಹಾಪುರ, ಶೋರಾಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್ ಹಾಗೂ ಹೊಸಪೇಟೆ.

ಹೆಸ್ಕಾಂ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೀಶ್ವರ,
ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸವನೂರು, ಸಿರ್ಸಿ, ಕುಮಟಾ, ಬಾಗಲಕೋಟೆ, ರಬಕವಿ-ಬನಹಟ್ಟಿ, ಗದಗ, ಗೋಕಾಕ್, ಹಾವೇರಿ, ಇಳಕಲ್, ಮುಧೋಳ, ರಾಣೆಬೆನ್ನೂರು ಹಾಗೂ ವಿಜಯಪುರ ಪಟ್ಟಣದಲ್ಲಿ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ.

ಇದನ್ನೂ ಓದಿ | Water Crisis : ನಿಮ್ಮ ಏರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆನಾ?; ಈ ಹೆಲ್ಪ್‌ಲೈನ್‌ ನಂಬರ್‌ಗೆ ಕಾಲ್‌ ಮಾಡಿ

ಈ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಪರಿಣಿತಿಹೊಂದಿದ ಮಾಹಿತಿ ತಂತ್ರಜ್ಞರ(IT) ತಂಡ 24/7 ಕಾರ್ಯನಿರ್ವಹಿಸಲಿದೆ. ಗ್ರಾಹಕರು ಸೇವಾ ಸ್ಥಗಿತ ಕಾಲದಲ್ಲಿ ಸಹಕರಿಸಬೇಕು ಎಂದು ಇಂಧನ ಇಲಾಖೆ ಮನವಿ ಮಾಡಿದೆ.

Exit mobile version