Site icon Vistara News

Rain News | ಮಳೆಗೆ ಜನ ಅತಂತ್ರ; ಹೊನ್ನಾವರ ತಾಲೂಕಿನಲ್ಲಿ ಎರಡು ಕಾಳಜಿ ಕೇಂದ್ರ ಆರಂಭ

Rain News

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಭಾನುವಾರ ಸಂಜೆಯಿಂದ ಭಾರಿ ಮಳೆ (Rain News) ಸುರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತ್ಯಗೊಂಡಿದೆ. ಮಳೆ ಮುಂದುವರಿದ ಹಿನ್ನೆಲೆಯಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ 2 ಕಾಳಜಿ ಕೇಂದ್ರಗಳನ್ನು ತೆರೆದು ತಾಲೂಕು ಆಡಳಿತದಿಂದ ನೆರೆ ಸಂತ್ರಸ್ತರಿಗೆ ಆಶ್ರಯ ವ್ಯವಸ್ಥೆ ಕಲ್ಪಿಸಲಾಗಿದೆ.

ಕಳೆದ 3ರಿಂದ 4 ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಆಗಾಗ ಸಣ್ಣ ಮಳೆ ಬರುತ್ತಿರುವುದು ಬಿಟ್ಟರೆ ಸಮಸ್ಯೆಯಾಗಿರಲಿಲ್ಲ. ಭಾನುವಾರ ಸಂಜೆ 4 ಗಂಟೆಯಿಂದ ಸುರಿದ ದಿಢೀರ್ ಮಳೆಗೆ ಹಳ್ಳ ತುಂಬಿ ಹರಿದಿದ್ದು, ತೋಟ, ಗದ್ದೆ, ಶಾಲೆಯ ಅಂಗಳ, ಹಳ್ಳಗಳಿಗೆ ಹೊಂದಿಕೊಂಡಿರುವ ಮನೆಯ ಅಂಗಳಕ್ಕೆ ನೀರು ನುಗ್ಗಿದೆ. ಒಂದೇ ಸಮನೆ ಸುರಿದ ಮಳೆಗೆ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.

ಇದನ್ನೂ ಓದಿ | Mysore Dasara 2022 | ಕುಶಾಲು ತೋಪು ಸದ್ದಿಗೆ ಬೆಚ್ಚಿ ಓಡಿದ ಶ್ರೀರಾಮ, ಭೀಮ, ಪಾರ್ಥಸಾರಥಿ, ಸುಗ್ರೀವರು!

ಇನ್ನು ಎಡೆಬಿಡದೇ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಅಶುರ್ಖಾನಗಲ್ಲಿ ಅಲ್ಲಾಬಕ್ಷ ಇಸುಬ್ ಸಾಬ್ ಅವರ ಮನೆಯ ಗೋಡೆ ಕುಸಿದಿದೆ. ಮನೆಯ ಗೋಡೆ ಮಣ್ಣಿನದ್ದಾಗಿರುವ ಹಿನ್ನೆಲೆಯಲ್ಲಿ ಮಳೆಯ ರಭಸಕ್ಕೆ ಗೋಡೆ ಹಾಗೂ ಛಾವಣಿ ಕುಸಿದು ತೀವ್ರ ಹಾನಿಯಾಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋಡೆ ಕುಸಿತದಿಂದ ಅಂದಾಜು 85 ಸಾವಿರ ರೂಪಾಯಿ ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ಮೂರ್ನಾಲ್ಕು ದಿನಗಳ ಕಾಲ ಕರಾವಳಿಯಲ್ಲಿ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ನದಿ, ಸಮುದ್ರ ತೀರದ ನಿವಾಸಿಗಳಿಗೆ ಸುರಕ್ಷತೆ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಅಗತ್ಯವಿದ್ದಲ್ಲಿ ಅಂತಹ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ | Rain News | ಬೆಳಗಾವಿಯಲ್ಲಿ ಮಳೆ ಆರ್ಭಟ : ಭೋರ್ಗರೆದ ಘಟಪ್ರಭಾ ‌ನದಿ, ಪ್ರವಾಹ ಭೀತಿ

Exit mobile version