ಹಾಸನ: ಇಂದಿನಿಂದ (ಜ.13) ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ (Operation Elephant) ಚಾಲನೆ ನೀಡಲಾಗಿದೆ. ಮೊದಲ ದಿನವೇ ಕಾಡಾನೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಎರಡೇ ಗಂಟೆಯಲ್ಲಿ ಪುಂಡಾನೆಯನ್ನು ಅಭಿಮನ್ಯು ತಂಡ ಸೆರೆಹಿಡಿದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ನಲ್ಲೂರು ಗ್ರಾಮದ ಸಾರಾ ಎಸ್ಟೇಟ್‌ನಲ್ಲಿ ಒಂಟಿ ಸಲಗವನ್ನು ಸೆರೆಹಿಡಿಯಲಾಗಿದೆ.
ಮೂವರು ವೈದ್ಯರು ಹಾಗೂ ನುರಿತ ತಂಡದೊಂದಿಗೆ ಇಂದಿನಿಂದ ಸತತ ಒಂದು ತಿಂಗಳ ಕಾರ್ಯಾಚರಣೆ ನಡೆಯಲಿದೆ. ಇದರಲ್ಲಿ ಕಾಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುತ್ತದೆ. ಮೊದಲು ಮೂರು ಸಲಗಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲಿದೆ. ನಂತರ ಇನ್ನೂ ಏಳು ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸರ್ಕಾರದ ಮೌಖಿಕ ಆದೇಶ ನೀಡಿದೆ.
ಮೈಸೂರು ದಸರಾದಲ್ಲಿ 8 ಭಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನನ ಸಾವಿನ ಬಳಿಕ ಸ್ಥಗಿತವಾಗಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಎಂಟು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭವಾಗಿದೆ. ಪುಂಡಾಟ ನಡೆಸುತ್ತಿರುವ ಎಲ್ಲಾ ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿದು ಸ್ಥಳಾಂತರ ಮಾಡುವ ತಯಾರಿ ಮಾಡಿಕೊಂಡಿದೆ. ಇನ್ನು ಅರ್ಜುನನ್ನು ಕೊಂದ ಕಾಡಾನೆಯನ್ನೂ ಸೆರೆಹಿಡಿದು ಅರ್ಜುನನ ಸಾವಿಗೆ ನ್ಯಾಯ ಒದಗಿಸೇಕೆಂಬ ಬೇಡಿಕೆಯೂ ಹೆಚ್ಚಿದೆ.
ಇದನ್ನೂ ಓದಿ: Peacock meat : ಮಾಂಸಕ್ಕಾಗಿ ವಿಷದ ಕಾಳು ಎಸೆದು ನವಿಲುಗಳ ಕೊಂದರು; ಬೆನ್ನಟ್ಟಿದಾಗ ನದಿಗೆ ಹಾರಿದ ಕಿಡಿಗೇಡಿಗಳು
ಕಳೆದ ಬಾರಿಯ ಕಾರ್ಯಾಚರಣೆಯಲ್ಲಿ ಆದ ತಪ್ಪುಗಳು ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯನ್ನು ವಹಿಸಿದ್ದಾರೆ. ಈ ಬಾರಿ ಅಧಿಕಾರಿಗಳು ಮಾವುತರಿಗೆ, ಕಾವಾಡಿಗರಿಗೆ ಹಾಗೂ ಇಲಾಖೆ ಸಿಬ್ಬಂದಿಗೆ ಕಾರ್ಯಾಚರಣೆಗೂ ಮುನ್ನ ಕೆಲ ಪಾಠವನ್ನು ಮಾಡಿದ್ದಾರೆ. ಯಾಕಂದರೆ ಕಳೆದ ಡಿಸೆಂಬರ್ 4 ರಂದು ಒಂಟಿ ಸಲಗ ದಾಳಿಗೆ ಅರ್ಜುನ ಬಲಿಯಾಗಿದ್ದ. ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಿಂದ ಕಾಡಾನೆ ಸೆರೆ ಕಾರ್ಯಾಚರಣೆಯು ಸ್ಥಗಿತಗೊಂಡಿತ್ತು.
ಇದೀಗ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ. ಅಭಿಮನ್ಯುವಿಗೆ ಸುಗ್ರೀವಾ, ಕರ್ನಾಟಕ ಭೀಮಾ, ಹರ್ಷ, ಪ್ರಶಾಂತ, ಅಶ್ವತ್ಥಾಮ, ಮಹೇಂದ್ರ, ಧನಂಜಯ ಸೇರಿ ಒಟ್ಟು ಎಂಟು ಸಾಕಾನೆಗಳು ಆಪರೇಷನ್ ನಲ್ಲಿ ಭಾಗಿಯಾಗಿವೆ.
ನಿನ್ನೆ ಶುಕ್ರವಾರವೇ ಆಪರೇಷನ್ ಆರಂಭಕ್ಕೂ ಮುನ್ನ ಸ್ಥಳೀಯ ಶಾಸಕ ಹೆಚ್.ಕೆ.ಸುರೇಶ್, ಸಿಸಿಎಫ್ ರವಿಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಾಕಾನೆಗಳಿಗೆ ಪೂಜೆ ನೆರವೇರಿಸಿದ್ದರು. ಇದೇ ವೇಳೆ ಅರ್ಜುನ ಆನೆಯನ್ನು ಕೊಂದ ಕಾಡಾನೆಯನ್ನು ಸೆರೆ ಹಿಡಿಯಲೇಬೇಕೆಂಬ ಒತ್ತಾಯಗಳು ಹೆಚ್ಚಾಗಿವೆ. ಆ ಬಲಿಷ್ಟ ಕಾಡಾನೆಯನ್ನು ಹಿಡಿಯಲು ಬಲಿಷ್ಠವಾಗಿರುವ ಅಭಿಮನ್ಯುನೇ ಬರಬೇಕೆಂಬ ವಿಡಿಯೊ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಕಾರ್ಯಾಚರಣೆಗೆ ಅಭಿಮನ್ಯು ಆಗಮಿಸಿ ಮೊದಲ ದಿನವೇ ಪುಂಡಾನೆ ಸೆರೆಹಿಡಿಯಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ