Site icon Vistara News

Operation Elephant: ಬಾಲಕಿಯ ಬಲಿ ಪಡೆದ, ಡಾಕ್ಟರ್‌ ಮೇಲೆ ಅಟ್ಯಾಕ್‌ ಮಾಡಿದ್ದ ಪುಂಡ ಕಾಡಾನೆ ಕೊನೆಗೂ ಸೆರೆ; ಹೇಗಿತ್ತು ಆಪರೇಷನ್‌ ಎಲಿಫೆಂಟ್‌?

#image_title

ದಾವಣಗೆರೆ/ಶಿವಮೊಗ್ಗ: ದಾವಣಗೆರೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ಬಾಲಕಿಯೊಬ್ಬಳನ್ನು ಕಾಡಾನೆಯೊಂದು ಕೊಂದು ಹಾಕಿತ್ತು. ಆನೆಯನ್ನು (Elephant attack) ಸೆರೆ ಹಿಡಿಯಲು ಅರಣ್ಯ ಇಲಾಖೆ ಶತಪ್ರಯತ್ನ ನಡೆಸಿತ್ತು. ಈ ನಡುವೆ ಅರಿವಳಿಕೆ ಔಷಧ ನೀಡಲು ಹತ್ತಿರ ಹೋದ ವೈದ್ಯರನ್ನೇ ಆನೆಯು ಸೊಂಡಿಲಿನಿಂದ ಎತ್ತಿ ಎಸೆದಿತ್ತು. ಇದೀಗ ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಮಂಗಳವಾರ (ಏ.11) ದಾವಣಗೆರೆ ಜಿಲ್ಲೆಯ‌ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮದ ಬಳಿ ಪುಂಡ ಕಾಡಾನೆಯನ್ನು (Operation Elephant) ಸೆರೆ ಹಿಡಿಯಲಾಗಿದೆ.

ಕ್ರೇನ್‌ ಮೂಲಕ ಕಾಡಾನೆಯನ್ನು ಲಾರಿಗೆ ರವಾನೆ

ಏ.8ರಂದು ದಾವಣಗೆರೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ಪುಂಡಾನೆಯ ದಾಂಧಲೆಗೆ ಕವನ (17) ಎಂಬ ಬಾಲಕಿ ಬಲಿಯಾಗಿದ್ದಳು. ಜಮೀನಿನಲ್ಲಿ ಅವರೆಕಾಯಿ ಬಿಡಿಸುತ್ತಿದ್ದಾಗ ಹಿಂದಿನಿಂದ ಬಂದು ಕಾಡಾನೆಯು ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡ ಕವನಾಳನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಳು. ಇತ್ತ ಕವನಾಳ ತಾಯಿ ಮಂಜುಳಾ ಸೇರಿ ಐವರು ಗಾಯಗೊಂಡಿದ್ದರು. ಈ ಘಟನೆ ಬೆನ್ನಲ್ಲೇ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಪುಂಡಾನೆಯನ್ನು ಸೆರೆ ಹಿಡಿದು ಕಾಡಿಗೆ ಬಿಡುವಂತೆ ಒತ್ತಾಯಿಸಿದ್ದರು.

ಅರಣ್ಯಾಧಿಕಾರಿಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಕಾಡಾನೆ

ಹೀಗಾಗಿ ಕಾರ್ಯಾಚರಣೆಗಿಳಿದ ಅರಣ್ಯಾಧಿಕಾರಿಗಳು ಆ ದಿನವೇ ಸಕ್ರೆಬೈಲು ಆನೆ ಬಿಡಾರದಿಂದ ಸಾಗರ, ಬಾಲಣ್ಣ, ಹಾಗೂ ಬಹದ್ದೂರ್ ಜತೆಗೆ ಇನ್ನೊಂದೆಡೆ ನಾಗರಹೊಳೆಯಿಂದ ಅಭಿಮನ್ಯು, ಭೀಮ ಮತ್ತು ಮಹೇಂದ್ರ ಎಂಬ ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆದರೆ ಕೈಗೆ ಸಿಗದೆ ಕಣ್ತಪ್ಪಿಸಿ ಪುಂಡಾನೆ ಓಡಾಡುತ್ತಿತ್ತು.

ನ್ಯಾಮತಿ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದ ಕಾಡಾನೆ

ಚನ್ನಗಿರಿಯ ಸೂಳೆಕೆರೆಯಲ್ಲಿ ಹುಡುಕಾಟ ನಡೆಸುವಾಗಲೇ ಅಲ್ಲಿಂದ ತಪ್ಪಿಸಿಕೊಂಡು ನ್ಯಾಮತಿ ಪ್ರದೇಶಕ್ಕೆ ಹೆಜ್ಜೆ ಹಾಕಿತ್ತು. ಚನ್ನಗಿರಿ ತಾಲೂಕಿನ ಸೂಳೆಕೆರೆ ಅರಣ್ಯ ಪ್ರದೇಶದ ಸುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಯ ಹುಟ್ಟಿಸಿದ್ದ ಈ ಕಾಡಾನೆಯ ಗಾತ್ರ ಸಣ್ಣದಾದರು, ಪುಂಡಾಟ ಮಾತ್ರ ದೊಡ್ಡದಾಗಿತ್ತು. ಸದ್ಯ ಕಾಡಾನೆ ಸೆರೆಯಿಂದ ಸುತ್ತಮತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ನಾಲ್ಕು ಸಾಕಾನೆಯ ಸಹಾಯದಿಂದ ಪುಂಡಾನೆಯನ್ನು ಸೆರೆಯಿಡಿದಿದ್ದು, ಕ್ರೇನ್‌ ಮೂಲಕ ಲಾರಿಯಲ್ಲಿ ಕಾಡಾನೆಯನ್ನು ರವಾನೆ ಮಾಡಲಾಗಿದೆ.

ವೈದ್ಯರ ಮೇಲೆ ದಾಳಿ ಮಾಡಿದ್ದ ಕಾಡಾನೆ ಸೆರೆ

ವೈದ್ಯರ ಮೇಲೂ ದಾಳಿ ಮಾಡಿದ್ದ ಪುಂಡಾನೆ

ಅರಣ್ಯಾಧಿಕಾರಿಗಳಿಗೆ ಚಳ್ಳೇಹಣ್ಣು ತಿನ್ನಿಸಿ ಓಡಾಡುತ್ತಿದ್ದ ಕಾಡಾನೆಯು, ಮಂಗಳವಾರ ಮುಂಜಾನೆ (ಏ.11) ಜೀನಹಳ್ಳಿಯಲ್ಲಿ ಪತ್ತೆಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಸಕ್ರೆಬೈಲು ಆನೆ ಬಿಡಾರದ ಹಿರಿಯ ವೈದ್ಯಾಧಿಕಾರಿ ಡಾ. ವಿನಯ್‌ ಅವರು ಸಿಬ್ಬಂದಿ ಸಮೇತವಾಗಿ ಅಲ್ಲಿಗೆ ಧಾವಿಸಿದರು.

ದೂರದಿಂದಲೇ ಅರಿವಳಿಕೆ ಔಷಧವನ್ನು ಆನೆಗೆ ಹೊಡೆಯಲಾಯಿತು. ಸಾಮಾನ್ಯವಾಗಿ ಒಂದೆರಡು ಸುತ್ತಿನ ಅರಿವಳಿಕೆ ಔಷಧದಲ್ಲಿ ಆನೆ ಪ್ರಜ್ಞೆ ತಪ್ಪಿ ಬೀಳುತ್ತದೆ. ಆದರೆ, ಇಲ್ಲಿ ಆನೆ ಹಾಗೆ ನಿಂತಿತ್ತು. ಹೀಗಾಗಿ ಅದರ ಹತ್ತಿರಕ್ಕೆ ಹೋಗಿ ಇನ್ನೊಂದು ಡೋಸ್‌ ಔಷಧ ನೀಡಲು ಡಾ. ವಿನಯ್‌ ಮುಂದಾಗಿದ್ದರು.

ಇದನ್ನೂ ಓದಿ: Wild Animals Attack: ರೈತನನ್ನು ಬಲಿ ಪಡೆದಿದ್ದ ಕರಡಿ ಮತ್ತೆ ಪ್ರತ್ಯಕ್ಷ; ತುಮಕೂರು ಜನರಲ್ಲಿ ಮತ್ತೆ ಹೆಚ್ಚಿದ ಆತಂಕ

ಆನೆ ಶಕ್ತಿ ಕಳೆದುಕೊಂಡಿದೆ ಎಂದು ಭಾವಿಸಿದ ಡಾ. ವಿನಯ್‌ ಅವರು ಇನ್ನೊಂದು ಸುತ್ತು ಅರಿವಳಿಕೆ ಕೊಡಲು ಮುಂದಾಗುತ್ತಿದ್ದಂತೆಯೇ ಸಿಟ್ಟಿಗೆದ್ದ ಆನೆ ಸೊಡಿಲಿನಿಂದ ಅವರಿಗೆ ಬಡಿದಿತ್ತು. ಗಾಯಗೊಂಡ ವೈದ್ಯ ವಿನಯ್‌ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Exit mobile version