Site icon Vistara News

Operation Elephant: ಕಡಬದಲ್ಲಿ ಇಬ್ಬರನ್ನು ಬಲಿ ಪಡೆದ ಪುಂಡ ಕಾಡಾನೆ ಕೊನೆಗೂ ಸೆರೆ; ಹೇಗಿತ್ತು ಆಪರೇಷನ್‌ ಎಲಿಫೆಂಟ್‌?

Operation Elephant

#image_title

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಪುಂಡ ಕಾಡಾನೆಯನ್ನು (Operation Elephant) ಸೆರೆ ಹಿಡಿಯಲಾಗಿದೆ. ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆ ಗುರುವಾರ ಯಶಸ್ಸು ಕಂಡಿದೆ. ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಲಾಗಿದೆ.

ಫೆ.20 ಬೆಳಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52) ಎಂಬುವವರು ಮೃತಪಟ್ಟಿದ್ದರು. ಆ ರಾತ್ರಿಯೇ ಮೈಸೂರು ದುಬಾರೆಯಿಂದ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗು ಮಹೇಂದ್ರ ಎಂಬ ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಫೆ.21 ರಂದು ಡ್ರೋನ್ ಕ್ಯಾಮರಾ ಬಳಸಿ ಆನೆಯನ್ನು ಪತ್ತೆ ಹಚ್ಚಲಾಗಿತ್ತು.

ಪುಂಡಾನೆ ಸೆರೆ

ದುಬಾರೆಯ ಆನೆಗಳ ಮೂಲಕ ಸೆರೆಹಿಡಿಯುವ ಕಾರ್ಯಾಚರಣೆಯು ರೆಂಜಲಾಡಿ ಗ್ರಾಮದ ತುಂಬೆ ರಕ್ಷಿತಾರಣ್ಯದಲ್ಲಿ ಆರಂಭಗೊಂಡಿತ್ತು. ಆದರೆ ಬುಧವಾರ ಆನೆಗೆ ಅರಿವಳಿಕೆ ನೀಡುವ ಪ್ರಯತ್ನ ವಿಫಲಗೊಂಡಿತ್ತು. ಗುರುವಾರ ಸಂಜೆ ಮತ್ತೆ ಆನೆಯನ್ನು ಪತ್ತೆ ಹಚ್ಚಿ ಅರಿವಳಿಕೆ ಮದ್ದು ಶೂಟ್ ಮಾಡಿ ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ.

ಏನಿದು ಘಟನೆ ?

ಫೆ.20ರ ಸೋಮವಾರ ಮುಂಜಾನೆ ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿರುವ ರಂಜಿತಾ ಅವರು ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿತ್ತು.ಇದೇ ವೇಳೆ ಸ್ಥಳದಲ್ಲಿದ್ದ ರಮೇಶ್ ರೈ ಎಂಬುವವರ ಮೇಲೂ ದಾಳಿ ಮಾಡಿತ್ತು. ಗಂಭೀರ ಗಾಯಗೊಂಡ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ರಂಜಿತಾ ನೆಲ್ಯಾಡಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಇದರಿಂದ ಆಕ್ರೋಶಿತರಾದ ಸ್ಥಳೀಯರು ಕೂಡಲೇ ಈ ಕಾಡಾನೆಯನ್ನು ಹಿಡಿದು ದೂರ ಒಯ್ಯಬೇಕು, ಅಲ್ಲಿಯವರೆಗೆ ಮೃತದೇಹವನ್ನು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಬಳಿಕ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಭರವಸೆ ನೀಡಿದಾಗ ಪ್ರತಿಭಟನೆಯಿಂದ ಹಿಂದೆ ಸರಿದಿದ್ದರು.

ಇದನ್ನೂ ಓದಿ: ಡಂಡೀ ವಿವಿಯ ಸಂಶೋಧನಾ ಅಧ್ಯಯನಕ್ಕೆ ರಾಜ್ಯದ 3 ವಿವಿಗಳು ಆಯ್ಕೆ; ಯುಕೆಗೆ ಹಾರಿದ 15 ಪ್ರತಿಭಾವಂತ ವಿದ್ಯಾರ್ಥಿಗಳು

Exit mobile version