ಚಿಕ್ಕಬಳ್ಳಾಪುರ: ಹಲವು ದಿನಗಳಿಂದ ಜಿಲ್ಲೆಯಲ್ಲಿ ಮೂರು ಚಿರತೆಗಳ ಒಟ್ಟೊಟ್ಟಿಗೆ ಕಾಣಿಸಿಕೊಂಡು ಜನತೆಯನ್ನು ಆತಂಕಕ್ಕೆ ದೂಡಿತ್ತು. ದಿನಾ ಒಂದಿಲ್ಲೊಂದು ಸಾಕು ಪ್ರಾಣಿಗಳು ಇವುಗಳಿಗೆ ಆಹಾರವಾಗುತ್ತಲೇ ಇದ್ದವು. ಇವು ಜನರಿಗೆ ಜೀವ ಭಯವನ್ನು ಹುಟ್ಟುಹಾಕಿತ್ತು. ಮನೆಯಿಂದ ಹೊರಗೆ ಕಾಲಿಡಲೇ ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಶನಿವಾರ (ಸೆ.10) ಮಧ್ಯರಾತ್ರಿ ಒಂದು ಚಿರತೆ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯುವಲ್ಲಿ (Operation Leopard) ಯಶಸ್ವಿಯಾಗಿದ್ದಾರೆ.
ಗೌರಿಬಿದನೂರು ಅರಣ್ಯ ಇಲಾಖೆ ವ್ಯಾಪ್ತಿಯ ಟೇಕಲಹಳ್ಳಿ, ಜರಬಂಡಹಳ್ಳಿ, ದಿನ್ನಹಳ್ಳಿ ವ್ಯಾಪ್ತಿಯ ಗುಡ್ಡದ ಭಾಗಗಳಲ್ಲಿ ಸತತ ಒಂದು ತಿಂಗಳಿಂದ ಮೂರು ಚಿರತೆಗಳ ಗುಂಪು ಕಾಣಿಸಿಕೊಳ್ಳುತ್ತಲೇ ಇತ್ತು. ಪ್ರತಿನಿತ್ಯ ನಾಯಿ, ಕೋಳಿ, ಕರುಗಳು ಸೇರಿದಂತೆ ಸಾಕು ಪ್ರಾಣಿಗಳನ್ನು ಚಿರತೆಗಳು ತಿನ್ನುತ್ತಿದ್ದವು. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ನಂತರ ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ | Operation Leopard | ಬಲೆಗೆ ಬೀಳದ ಬೆಳಗಾವಿ ಚಿರತೆ; ಸೋಮವಾರದಿಂದ ಶಾಲಾ-ಕಾಲೇಜು ಆರಂಭ
ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ನಾಯಿಗಳನ್ನು ಬೋನಿನಲ್ಲಿ ಬಿಟ್ಟು ಕಾರ್ಯಾಚರಣೆ ಆರಂಭಿಸಿದ್ದರು. ಸತತ ಹತ್ತು ದಿನಗಳಿಂದ ಚಿರತೆ ಹಿಡಿಯುವಲ್ಲಿ ಕಾರ್ಯಾಚರಣೆ ಮಾಡಿದ ಅಧಿಕಾರಿಗಳು ಒಂದು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆಯನ್ನು ಹಿಡಿದು ಗೌರಿಬಿದನೂರಿಗೆ ಕೊಂಡೊಯ್ದಿದ್ದಾರೆ. ಇದೀಗ ಇನ್ನೂ ಎರಡು ಚಿರತೆಗಳನ್ನು ಹಿಡಿಯಲು ಅಧಿಕಾರಿಗಳು ಮುಂದಾಗಿದ್ದು, ಪತ್ತೆಗೆ ಬಲೆಬೀಸಿದ್ದಾರೆ.
ಇದನ್ನೂ ಓದಿ | ಮೈಸೂರು ನಗರದ ಪಕ್ಕವೇ ಮರಿಗಳ ಜತೆ ಕಾಣಿಸಿಕೊಂಡ ತಾಯಿ ಚಿರತೆ, ಭಯದಲ್ಲಿ ಜನ, ಶಾಲೆಗಳಿಗೆ ರಜೆ