ಬೆಂಗಳೂರು/ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ ಸದ್ದು ಮಾಡಲಿದೆಯೇ ಎಂಬ ವಿಷಯ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರು ಜೆಡಿಎಸ್ ಶಾಸಕರು ಅಡ್ಡ ಮತ ಚಲಾಯಿಸಿರುವುದು, ಮಂಡ್ಯದಲ್ಲಿ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿಪರ ಪ್ರಚಾರ ನಡೆಸಿರುವುದು ಇದಕ್ಕೆ ಇಂಬು ನೀಡುವಂತಿದೆ.
ಈ ಮಧ್ಯೆ ಕುಟುಂಬ ರಾಜಕಾರಣದಿಂದ ಬೇಸತ್ತ ಕೆಲವರು ಬಿಜೆಪಿಗೆ ಬರುತ್ತಾರೆ. ಕಾದು ನೋಡಿ, ಪರಿಸ್ಥಿತಿಗೆ ಅನುಗುಣವಾಗಿ ಯಾರು ಯಾರು ಬರುತ್ತಾರೆ ಅನ್ನುವುದು ಗೊತ್ತಾಗುತ್ತದೆ ಎಂದು ನುಡಿದಿರುವ ಸಚಿವ ಅಶ್ವತ್ಥನಾರಾಯಣ ಅವರ ಮಾತಿನ ಹಿಂದಿನ ಮರ್ಮವೇನು ಎಂಬುವುದರ ಸುಳಿವು ದೊರೆಯುತ್ತದೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಚಿವ ಅಶ್ವತ್ಥ ನಾರಾಯಣ, ಇತರ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ, ಅದೇ ರೀತಿ ಅವಕಾಶಗಳಿವೆ. ಹೀಗಾಗಿ ಇನ್ನೂ ಹಲವು ಜನ ಬಿಜೆಪಿಗೆ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ಆಪರೇಷನ್ ಕಮಲದಲ್ಲಿ 17 ಘಟಾನುಘಟಿ ಕಾಂಗ್ರೆಸ್ ಶಾಸಕರು ಬಿಜೆಪಿ ತೆಕ್ಕೆಗೆ ವಲಸೆ ಬಂದಿದ್ದರು. ಇದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಾಯಿತು ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ | ಬಿಜೆಪಿ ಸರ್ಕಾರದ ಮೇಲೆ ಗರಂ ಆದ ಸಂಸದ ಡಿ.ಕೆ. ಸುರೇಶ್
ಇದೀಗ ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆಗೆ ಸಾಕ್ಷ್ಯ ಎಂಬಂತೆ ಕೋಲಾರದ ಶಾಸಕ ಶ್ರೀನಿವಾಸಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ರಾಜ್ಯಸಭೆ ಚುನಾವಣೆ ವೇಳೆ ಅಡ್ಡಮತ ಚಲಾಯಿಸುವ ಮೂಲಕ ಜೆಡಿಎಸ್ ವರಿಷ್ಠರ ವಿರುದ್ಧ ನೇರವಾಗಿಯೇ ಆಕ್ರೋಶ ಹೊರಹಾಕಿರುವುದನ್ನು ಕಾಣಬಹುದು.
ಇತ್ತೀಚೆಗೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೋಲಾರದ ಮಾಜಿ ಶಾಸಕ ವರ್ತೂರ್ ಪ್ರಕಾಶ್, ಮಾಜಿ ಎಂಎಲ್‌ಸಿ ಸಂದೇಶ್ ನಾಗರಾಜ್, ಮಂಡ್ಯದ ಲಕ್ಷ್ಮೀ ಅಶ್ವಿನ್ ಗೌಡ, ಅಶೋಕ್ ನಾಗರಾಜ್ ಮತ್ತಿತರ ನಾಯಕರು ಬಿಜೆಪಿಗೆ ಬಂದಿದ್ದರು. ಇನ್ನು ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇನ್ನೂ ಯಾವ ರೀತಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ ಎಂಬುವುದನ್ನು ಕಾದುನೋಡಬೇಕಾಗಿದೆ.
ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ಬಿಜೆಪಿಗೆ ಕಮ್‌ಬ್ಯಾಕ್?
ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಬಳಿಕ ಮುಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದ ಎಲ್.ಆರ್.ಶಿವರಾಮೇಗೌಡ, ಇದೀಗ ಬಿಜೆಪಿ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಪರ ಮಂಡ್ಯದ ನಾಗಮಂಗಲದಲ್ಲಿ ಸಚಿವರಾದ ನಾರಾಯಣಗೌಡ ಮತ್ತು ಗೋಪಾಲಯ್ಯ ಜತೆ ಮತಯಾಚನೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಶಿವರಾಮೇಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆ ಮುಂದಿನ ಎಂಎಲ್‌ಎ ಚುನಾವಣೆಗೆ ನಾಗಮಂಗಲದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಶಿವರಾಮೇಗೌಡ ಹೆಜ್ಜೆ ಹಾಕಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.
ಈ ಹಿಂದೆ 2009ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮೇಗೌಡ ಸ್ಪರ್ಧಿಸಿದ್ದರು. ಬಳಿಕ ಬಿಜೆಪಿ ತೊರೆದು, ಕಾಂಗ್ರೆಸ್‌ಗೆ ಹೋಗಿದ್ದರು. ಇದೀಗ ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆಯನ್ನು ಗಮನಿಸಿದರೆ ಮತ್ತೆ ಬಿಜೆಪಿಗೆ ಕಮ್ ಬ್ಯಾಕ್ ಮಾಡಲು ಮುಂದಾಗಿದ್ದಾಯೇ ಎಂಬ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಎಲ್ಲ ಮೂರು ಅಭ್ಯರ್ಥಿಗಳ ಜಯಭೇರಿ, ಎಂವಿಎಗೆ 3 ಸೀಟು