ವಿಜಯಪುರ: ಮಹಿಳಾ ನ್ಯಾಯವಾದಿ ಬಂಧನ ವಿರೋಧಿಸಿ ಹಾಗೂ ಕರ್ತವ್ಯಲೋಪ ಎಸಗಿದ ಮುಖ್ಯ ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಕೀಲರು ನಗರದ ಜಿಲ್ಲಾ ನ್ಯಾಯಾಲಯದ ಬಳಿ ಬುಧವಾರ ಉಗ್ರ ಪ್ರತಿಭಟನೆ ನಡೆಸಿದರು. ಅಲ್ಲದೆ, ಪೊಲೀಸರು ದೌರ್ಜನ್ಯದಿಂದ ಮಹಿಳಾ ನ್ಯಾಯವಾದಿಯನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು.
ಗುರುದತ್ ಮಂಗಲ ಕಾರ್ಯಾಲಯದ ರಸ್ತೆ ವಿಚಾರವಾಗಿ ಹೊಡೆದಾಟ ಪ್ರಕರಣದಲ್ಲಿ ದೂರು ದಾಖಲಾಗಿದ್ದರಿಂದ ವಕೀಲೆ ಅರುಂಧತಿ ಪಾಟೀಲ್ ಅವರನ್ನು ಗೋಳಗುಮ್ಮಟ ಪೊಲೀಸ್ ಠಾಣೆ ಪುರುಷ ಪೇದೆ ರಂಗಪ್ಪಗೋಳ ಬಂಧಿಸಿದ್ದರು. ಹೀಗಾಗಿ ಅರೆಸ್ಟ್ ವಾರೆಂಟ್ ರೀಕಾಲ್ ಇದ್ದಾಗಲೂ ವಕೀಲೆಯನ್ನು ಬಂಧಿಸಿದ್ದಾರೆ, ಪೇದೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಕೀಲರು ಒತ್ತಾಯಿಸಿದರು.
ಕೋರ್ಟ್ ಕಲಾಪ ಬಹಿಷ್ಕಾರ
ಕೋರ್ಟ್ ಕಲಾಪ ಬಹಿಷ್ಕರಿಸಿದ ನೂರಾರು ವಕೀಲರು, ಬಾಗಲಕೋಟೆ-ವಿಜಯಪುರ ರಸ್ತೆ ಸಂಚಾರ ತಡೆ ನಡೆಸಿ, ಮಾನವ ಸರಪಳಿ ರಚಿಸಿ ಟೈರ್‌ಗೆ ಬೆಂಕಿ ಹಚ್ಚಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ದಿ ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಆದರೂ ವಕೀಲರು ಪ್ರತಿಭಟನೆ ಮುಂದುವರಿಸಿದ್ದರಿಂದ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ದಾರಿ ಬಿಡಿ ಎಂದ ಯುವಕನಿಗೆ ಥಳಿತ
ವಕೀಲರ ಪ್ರತಿಭಟನೆ ವೇಳೆಯಲ್ಲಿ ಯುವಕನನ್ನು ವಕೀಲರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೃಷ್ಣಾ ಹಿಜೇರಿ ಹಲ್ಲೆಗೊಳಗಾದ ಯುವಕ. ವಕೀಲರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೃಷ್ಣಾ ರಸ್ತೆಯಲ್ಲಿ ದಾರಿ ಬಿಡುವಂತೆ ಯುವಕ ಆಗ್ರಹಿಸಿ, ಬೈಕ್ ತೆಗೆದುಕೊಂಡು ಪ್ರತಿಭಟನಾನಿರತರ ನಡುವೆ ಹೋಗಿದ್ದಾನೆ. ಹೀಗಾಗಿ ರೊಚ್ಚಿಗೆದ್ದ ವಕೀಲರು ಆತನ ಮೇಲೆ ಹಲ್ಲೆಗೈದಿದ್ದಾರೆ. ಸ್ಥಳದಲ್ಲಿದ ಪೊಲೀಸರು ಯುವಕನ್ನು ರಕ್ಷಣೆ ಮಾಡಿದ್ದಾರೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮುಖ್ಯಪೇದೆ ಅಮಾನತು
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮಹಿಳಾ ನ್ಯಾಯವಾದಿಯನ್ನು ಬಂಧಿಸಿದ್ದ ವಿಜಯಪುರ ಗೋಳಗುಮ್ಮಟ ಪೊಲೀಸ್ ಠಾಣೆ ಮುಖ್ಯಪೇದೆ ಎ.ಎಸ್.ರಂಗಪ್ಪಗೊಳ ಅವರನ್ನು ಅಮಾನತು ಮಾಡಿ ಎಸ್‌ಪಿ ಎಚ್.ಡಿ.ಆನಂದಕುಮಾರ್ ಆದೇಶ ಹೊರಡಿಸಿದ್ದಾರೆ. ಮಹಿಳಾ ನ್ಯಾಯವಾದಿಯನ್ನು ಬಂಧಿಸುವಾಗ ಸಮವಸ್ತ್ರ ಧರಿಸದೆ, ಮಹಿಳಾ ಪೇದೆಯನ್ನು ಕರೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಮುಖ್ಯಪೇದೆಯನ್ನು ಅಮಾನತು ಮಾಡಲಾಗಿದೆ. ಮುಖ್ಯಪೇದೆ ಅಮಾನತು ಆದೇಶ ಓದಿದ ಬಳಿಕ ನ್ಯಾಯವಾದಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ.
ಇದನ್ನೂ ಓದಿ | ಗೋಲ್ಡ್ ರಿಕವರಿಗೆ ಬಂದಿದ್ದ ತಮಿಳುನಾಡು ಪೊಲೀಸರಿಗೆ ದಿಗ್ಬಂಧನ ಹಾಕಿದ ಚಿಕ್ಕಬಳ್ಳಾಪುರ ಜ್ಯುವೆಲರಿ ಮಾಲೀಕರು