ಬೆಳಗಾವಿ: ಕಿತ್ತೂರು ತಾಲೂಕಿನ ಬಚ್ಚನಕೇರಿಯಲ್ಲಿ ಕಿತ್ತೂರು ಕೋಟೆಯ ಪ್ರತಿರೂಪ ನಿರ್ಮಾಣಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಿತ್ತೂರಲ್ಲಿರುವ ಕೋಟೆ ಪಕ್ಕದಲ್ಲಿ ಅರಮನೆ ನಿರ್ಮಾಣಕ್ಕೆ ಬೇಡಿಕೆ ಇತ್ತು. ಆದರೆ ಸ್ಥಳ ಬದಲಾವಣೆ ಮಾಡಿರುವುದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರಾಣಿ ಚನ್ನಮ್ಮ ಅರಮನೆಯ ಪ್ರತಿರೂಪ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅಣಿಯಾಗಿದ್ದು, ಬಚ್ಚನಕೇರಿ ಗ್ರಾಮದಲ್ಲಿ ಅರಮನೆ ನಿರ್ಮಾಣಕ್ಕೆ ಜಿಲ್ಲಾಡಳಿತ 57 ಎಕರೆ ಜಾಗ ಮೀಸಲಿಟ್ಟಿದ್ದು, ಈ ಸಂಬಂಧ ಬೈಲಹೊಂಗಲ ಉಪವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಪತ್ರ ಬರೆದಿದ್ದು, ಈ ಸಂಬಂಧ ಆಕ್ಷೇಪಗಳಿದ್ದರೆ ಸಮರ್ಥನೀಯ ಕಾರಣ ನೀಡಲು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ.
ಜಿಲ್ಲಾಡಳಿತದ ನಿರ್ಧಾರ ವಿರೋಧಿಸಿ ಆ.೨ಕ್ಕೆ ಕಿತ್ತೂರು ಬಂದ್
ಕಿತ್ತೂರಿನಲ್ಲಿ ಕೋಟೆ ಪಕ್ಕ ಅರಮನೆ ನಿರ್ಮಾಣದ ಬೇಡಿಕೆ ಇದ್ದರೂ ಬೇರೆ ಕಡೆ ಜಿಲ್ಲಾಡಳಿತ ಅರಮನೆ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಆ.೨ಕ್ಕೆ ಕಿತ್ತೂರು ಬಂದ್ಗೆ ಕರೆ ನೀಡಲಾಗಿದೆ. ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆ.೨ರಂದು ಪ್ರತಿಭಟನೆಗೆ ನಿರ್ಧರಿಸಲಾಗಿದ್ದು, ನಿಚ್ಚಣಕಿಯ ಮಡಿವಾಳೇಶ್ವರ ಮಠದಿಂದ ಚನ್ನಮ್ಮ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಬೆಳಗಾವಿಗೆ ಆಗಮಿಸಿ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಹೋರಾಟದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಸಾಧ್ಯತೆ ಇದೆ.
ಇದನ್ನೂ ಓದಿ | Mahadayi Project | ಸುಪ್ರೀಂ ಹೇಳಿದ್ರೂ ಮಹಾದಾಯಿಗೆ ಚಾಲನೆ ಕೊಡುತ್ತಿಲ್ಲ ಡಬಲ್ ಎಂಜಿನ್ ಸರ್ಕಾರ!