ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ನಿರ್ಧಾರಗಳು ಅಸ್ಪಷ್ಟತೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ಆ. 22ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ರೈತರ ಕಿಸಾನ್ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಬಗ್ಗೆ ಕೇಂದ್ರ ಸರ್ಕಾರ ರಚಿಸಿರುವ 26 ಜನ ಸಮಿತಿಗೆ ಅಧ್ಯಕ್ಷರೇ ಇಲ್ಲ, ವರದಿ ನೀಡಲು ನಿರ್ದಿಷ್ಟ ಕಾಲಾವಧಿಯೂ ಇಲ್ಲ. ಬಹುತೇಕ ಸದಸ್ಯರು ಸರ್ಕಾರದ ಪರವಾಗಿದ್ದು, ಹೋರಾಟನಿರತ ರೈತರ ಬೇಡಿಕೆಯನ್ನು ವಿರೋಧಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಒಂದು ವರ್ಷ ಹೋರಾಟ ಮಾಡಿದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯಿಂದ ಮೂರು ಜನ ಮಾತ್ರ ಸಮಿತಿಗೆ ಬನ್ನಿ ಎಂದು ಆಹ್ವಾನ ನೀಡಿರುವುದು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆ. ಆದ್ದರಿಂದ ಸಮಿತಿ ರಚನೆಯನ್ನು ವಿರೋಧಿಸುತ್ತಿದ್ದೇವೆ ಎಂದರು.
ಕಬ್ಬಿನ ದರ ನಿಗದಿ ಬಗ್ಗೆ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯ ಸರ್ಕಾರಕ್ಕೆ ಆಗಸ್ಟ್ 5 ರವರೆಗೆ ಅಂತಿಮ ಗಡುವು ನೀಡುತ್ತೇವೆ, ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಲ್ಲ ಕೃಷಿ ಉತ್ಪನ್ನಗಳಿಗೆ ಎಲ್ಲಾ ಪ್ರದೇಶಗಳ ಎಲ್ಲ ಬೆಳೆಗಳಿಗೂ ಫಸಲ್ ಬಿಮಾ ಬೆಳೆ ವಿಮೆ ಜಾರಿ, ರೈತರ ಕೃಷಿ ಸಾಲ ನೀತಿ ಬದಲಾವಣೆ, ಮಳೆ ಹಾನಿ ಬೆಳೆನಷ್ಟ ಮಾನದಂಡ ಬದಲಿಸುವುದು, ರೈತರ ಕೃಷಿ ಉತ್ಪನ್ನ, ಹಾಲಿನ ಉತ್ಪನ್ನ ಸೇರಿ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ತೆರವು ಮಾಡುವ ಬಗ್ಗೆ ಕೇಂದ್ರ ಸರ್ಕಾರ ಮರುಶೀಲನೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಷ್ಟ್ರೀಯ ಕಿಸಾನ್ ಮಹಾಸಂಘ ಸಮ್ಮುಖದಲ್ಲಿ ಕಿಸಾನ್ ಮಹಾ ಪಂಚಾಯತ್‌ನಲ್ಲಿ ಒತ್ತಾಯಿಸಲಾಗುವುದು ಎಂದರು.
ಇದನ್ನೂ ಓದಿ | SBI Research| ಕರ್ನಾಟಕದಲ್ಲಿ ಹತ್ತಿ ಬೆಳೆದ ರೈತರ ಆದಾಯ ಡಬಲ್