Site icon Vistara News

Orchids School | ಶಾಲಾ ಕಟ್ಟಡ ಗಲಾಟೆ; ಪೋಷಕರಿಂದ ತೀವ್ರ ತರಾಟೆ

Orchids School BTM LAYOUT

ಬೆಂಗಳೂರು: ಪ್ರತಿ ಪೋಷಕರಿಗೂ ತಮ್ಮ ಮಕ್ಕಳು ಉತ್ತಮ ಸೌಕರ್ಯ ಇರುವ ಶಾಲೆಯಲ್ಲಿ (Orchids School) ಶಿಕ್ಷಣ ಪಡೆಯಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ಕೆಲವರು ಸಾಲಸೋಲ ಮಾಡಿಕೊಂಡಾದರೂ ಸರಿ, ಲಕ್ಷ ಲಕ್ಷ ರೂಪಾಯಿ ಫೀಸ್‌ ಕಟ್ಟಿ ಶಾಲೆಗೆ ಸೇರಿಸುತ್ತಾರೆ. ನಗರದ ಶಾಲೆಯೊಂದು ಮಾಡಿರುವ ಕಾರ್ಯಕ್ಕೆ ಪೋಷಕರು ಕಿಡಿಕಾರಿದ್ದು, ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ನಗರದ ಬಿಟಿಎಂ ಲೇಔಟ್‌ನ ಆರ್ಕಿಡ್ಸ್ ಶಾಲೆ ಆವರಣದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಶಾಲಾ ಗಲಾಟೆ ಇನ್ನೂ ಮುಗಿದಿಲ್ಲ. ಪೋಷಕರು ಹಾಗೂ ಆರ್ಕಿಡ್ಸ್ ಸ್ಕೂಲ್ ನಡುವಿನ ಜಟಾಪಟಿ ಮುಂದುವರಿದಿದೆ. ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಎಲ್‌ಕೆಜಿ, ಯುಕೆಜಿ ಮಕ್ಕಳನ್ನು ಮಾತ್ರ ಕ್ಯಾಂಪಸ್ ಶಿಫ್ಟ್ ಮಾಡಲು ನಿರ್ಧಾರ ಮಾಡಿದೆ.

ಇದನ್ನೂ ಓದಿ | Delhi MCD Election| ಬಿಜೆಪಿ ‘ಎಕ್ಸಿಟ್​​’ ಗೆ ಮುನ್ಸೂಚನೆ ನೀಡಿದ್ದ ಎಕ್ಸಿಟ್​ ಪೋಲ್ಸ್​

ಆ ಚಿಕ್ಕ ಕಟ್ಟಡ ಇರುವ ಜಾಗಕ್ಕೆ ಶಾಲೆ ಶಿಫ್ಟ್ ವಿಚಾರವಾಗಿ ಆರ್ಕಿಡ್ಸ್ ದಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಈ ನಡೆಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಶಾಲಾ ಫೀಸ್‌ ಕಟ್ಟಿದ್ದೇವೆ, ನಮ್ಮ ಮಕ್ಕಳನ್ನು ಯಾಕೆ ಹೀಗೆ ಶಿಕ್ಷಣದಿಂದ ವಂಚಿತರಾಗಿ ಮಾಡುತ್ತಿದ್ದೀರಾ? ಶಾಲೆಯ ಮೂಲಭೂತ ಸೌಕರ್ಯಗಳನ್ನು ನೋಡಿಯೇ ನಮ್ಮ ಮಕ್ಕಳಿಗೆ ಇಲ್ಲಿ ಅಡ್ಮಿಷನ್ ಮಾಡಿದ್ದೇವೆ. ಈಗ ಇಕ್ಕಟ್ಟಿರುವ ಜಾಗಕ್ಕೆ ನರ್ಸರಿ, ಎಲ್‌ಕೆಜಿ-ಯುಕೆಜಿ ಮಕ್ಕಳನ್ನು ಬಿಳೆಕಳ್ಳಿಯ ಕಟ್ಟಡಕ್ಕೆ ಶಿಫ್ಟ್ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ದಕ್ಷಿಣ ಬಿಇಒ ಪಂಕಜ ಜಿ.ಸಿ. ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಯಾವ ಬಿಲ್ಡಿಂಗ್ ಇರುತ್ತದೆಯೋ ಅದೇ ಬಿಲ್ಡಿಂಗ್ ಅಥವಾ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕು. ಅದು ಬಿಟ್ಟು ಮಕ್ಕಳನ್ನು ಬೇರೆ ಕಟ್ಟಡಕ್ಕೆ ಪೋಷಕರ ಅನುಮತಿ ಇಲ್ಲದೆ ಕಳಿಸುವ ಆಗಿಲ್ಲ. ಆದರೆ ಆರ್ಕಿಡ್ಸ್ ಶಾಲೆಯ ಆಡಳಿತವು ಮಕ್ಕಳನ್ನು ಬೇರೆ ಕಡೆ ಶಿಫ್ಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಶಾಲೆಗೆ ಭೇಟಿ ಕೊಟ್ಟಿರುವುದಾಗಿ ಹೇಳಿದ್ದರು. ಇಲ್ಲಿ ಮ್ಯಾನೇಜ್ಮೆಂಟ್‌ನ ಯಾವ ಸದಸ್ಯರು ಇಲ್ಲ, ಸದ್ಯ ನಾನು ನೋಟಿಸ್ ಜಾರಿ ಮಾಡಿದ್ದೇನೆ. ಆ ನೋಟಿಸ್‌ಗೆ ಸ್ಕೂಲ್ ಮ್ಯಾನೇಜ್ಮೆಂಟ್ ಮೂರು ದಿನಗಳಲ್ಲಿ ಉತ್ತರ ನೀಡಬೇಕು ಎಂದರು.

ಪೋಷಕರು ಓಕೆ ಅಂದರಷ್ಟೇ ಶಿಫ್ಟ್‌
ಅರಚಾಡಿ ಕಿರುಚಾಡಿದರೂ ಜಪ್ಪಯ್ಯ ಎಂದರೂ ಪ್ರಾಂಶುಪಾಲರು ಮಾತ್ರ ಕಿವಿ ಕೇಳಿಸದಂತೆ ಹೊರಬರದೆ ಕುಳಿತ್ತಿದ್ದರು. ಒತ್ತಾಯಕ್ಕೆ ಮಣಿದು ಮಾಧ್ಯಮಗಳ ಮುಂದೆ ಬಂದ ಪ್ರಾಂಶುಪಾಲರಾದ ಜಾಸ್ಮಿನ್‌, ಈಗಾಗಲೇ ಸ್ಥಳಾಂತರಕ್ಕೆ ಯಾವ ಪೋಷಕರು ಅನುಮತಿ ಕೊಟ್ಟಿದ್ದಾರೋ, ಅವರ ಮಕ್ಕಳನ್ನು ಮಾತ್ರ ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತೇವೆ. ನಾವು ಮಕ್ಕಳನ್ನು ಸ್ಕೂಲ್ ತೋರಿಸಲು ಹೊಸ ಬಿಲ್ಡಿಂಗ್‌ಗೆ ಕರೆದುಕೊಂಡು ಹೋಗಿದ್ದೇವೆ. ಯಾರು ಬೇಡ ಎನ್ನುತ್ತಾರೋ ಆ ಮಕ್ಕಳು ಇಲ್ಲಿಯೇ ಇರುತ್ತಾರೆ ಎಂಬ ಉಡಾಫೆ ಉತ್ತರ ನೀಡಿದ್ದರು. ಕೆಲವೊಂದು ಖಾಸಗಿ ಶಾಲೆಗಳು ತಮ್ಮದೆ ರೂಲ್ಸ್ ಹಾಕಿಕೊಂಡು ಪೋಷಕರ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಈ ಸಂಬಂಧ ಶಿಕ್ಷಣ ಇಲಾಖೆ ಗಮನಹರಿಸಿ ಲಗಾಮು ಹಾಕುವ ಕೆಲಸ ಮಾಡಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Border Dispute | ಶಿವಸೇನೆ ಕಾರ್ಯಕರ್ತರ ಉದ್ಧಟತನ; ಸಿಎಂ ಬೊಮ್ಮಾಯಿ ಭಾವಚಿತ್ರಕ್ಕೆ ಅಪಮಾನ

Exit mobile version