Site icon Vistara News

Organ Donation: ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವುದು ಅಗತ್ಯ: ಡಾ. ಧನಂಜಯ ಸರ್ಜಿ

Paropakaram Team shivamogga

#image_title

ಶಿವಮೊಗ್ಗ: “ಮನುಷ್ಯ ಹುಟ್ಟಿದ ಮೇಲೆ ಸಾವು ಖಚಿತ. ಆದರೆ ಈ ಸಾವು ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿವೆ. ಅದರಲ್ಲಿ ಈ ನೇತ್ರ ದಾನವೂ ಒಂದು. ಕಣ್ಣು ಸೇರಿದಂತೆ ಅಂಗ ಹಾಗೂ ಅಂಗಾಂಗ ದಾನದ (Organ Donation) ಮಹತ್ವವನ್ನು ಅರಿತಾಗ ಮಾತ್ರ ಮನುಷ್ಯ ತನ್ನ ಸಾವನ್ನೂ ಸಾರ್ಥಕಗೊಳಿಸಿಕೊಳ್ಳಬಹುದು” ಎಂದು ಡಾ.ಧನಂಜಯ ಸರ್ಜಿ ಹೇಳಿದರು.

ಸ್ವಚ್ಛ ಸುಂದರ ಸ್ವಸ್ಥ್ಯ ಶಿಕಾರಿಪುರಕ್ಕಾಗಿ, ಪರಸ್ಪರ ಸಹಕಾರಕ್ಕಾಗಿ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪರೋಪಕಾರಂ ತಂಡದ ವತಿಯಿಂದ ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ 200ನೇ ಕಾರ್ಯಕ್ರಮದ ಅಂಗವಾಗಿ ಭಾನುವಾರ (ಮಾ.19) ಸಂಜೆ ಹಮ್ಮಿಕೊಂಡಿದ್ದ ನೇತ್ರ ದಾನ ನೋಂದಣಿ ಅಭಿಯಾನ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವವರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ಹುಟ್ಟಿನಿಂದಲೋ, ಅಪಘಾತದಿಂದಲೋ ಆಕಸ್ಮಿಕವಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಜಗತ್ತನ್ನೇ ಕತ್ತಲಾಗಿಸಿಕೊಂಡವರಿಗೆ ಸತ್ತ ನಂತರ ಮನುಷ್ಯ ಮಾಡುವ ನೇತ್ರ ದಾನ ದೃಷ್ಟಿಯ ಭಾಗ್ಯ ಒದಗಿಸುತ್ತದೆ. ಅವರ ಬದುಕಿಗೆ ಬೆಳಕು ನೀಡುತ್ತದೆ. ಮನುಷ್ಯನ ಕಣ್ಣು, ಕಿಡ್ನಿ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಹೃದಯ, ಶ್ವಾಸಕೋಶ, ಕರುಳು, ಚರ್ಮ ಸೇರಿದಂತೆ 8 ಅಂಗಗಳನ್ನು ಹಾಗೂ 75 ಅಂಗಾಂಶಗಳನ್ನು ದಾನ ಮಾಡಬಹುದಾಗಿದೆ. ಅಂಗ ಮತ್ತು ಅಂಗಾಂಗದ ದಾನದಿಂದ ರೋಗಿಯ ಜೀವ ಹಾಗೂ ಜೀವನವನ್ನು ರಕ್ಷಿಸಬಹುದಾಗಿದೆ” ಎಂದರು.

ಇದನ್ನೂ ಓದಿ: Viral News : ಕಪಲ್‌ ಗೋಲ್‌ ಎಂದರೆ ಹೀಗಿರಬೇಕು ಎನ್ನುತ್ತಿದೆ ಈ ಸ್ಟಾರ್‌ ಜೋಡಿ; ನೆಟ್ಟಿಗರು ಫುಲ್ ಫಿದಾ

“ಅಂಗಾಂಗ ದಾನದಿಂದ ಮುಂದಿನ ಜನ್ಮದಲ್ಲಿ ಅಂಗವಿಕಲತೆ ಉಂಟಾಗುತ್ತದೆ, ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ ಎಂಬ ಭಾವನೆ ಇದೆ. ಅಲ್ಲದೆ ಜನಮಾನಸದಲ್ಲಿ ವಿವಿಧ ಮೂಢನಂಬಿಕೆಗಳೂ ಬಲವಾಗಿ ಬೇರೂರಿವೆ. ಇದರಿಂದಾಗಿ ಬಹುತೇಕರು ಅಂಗ ದಾನಕ್ಕೆ ಹಿಂದೇಟು ಹಾಕುತ್ತಾರೆ. ಆದ್ದರಿಂದ ಅಂಗಾಂಗ ದಾನಕ್ಕೆ ವಯಸ್ಸು, ಲಿಂಗ, ಜನಾಂಗ ಅಥವಾ ಧರ್ಮದ ಅಪ್ರಸ್ತುತತೆ ಬಗ್ಗೆ ಜನರ ಭಾವನೆಯನ್ನು ಬದಲಾಯಿಸಿ ಜಾಗೃತಿ ಮೂಡಿಸಬೇಕಿದೆ” ಎಂದು ಹೇಳಿದರು.

ಇದನ್ನೂ ಓದಿ: V Somanna: ಚಾಮರಾಜನಗರ ಚುನಾವಣೆ ಉಸ್ತುವಾರಿಗೆ ಸೋಮಣ್ಣ ಬೇಡ, ವಿಜಯೇಂದ್ರ ಓಕೆ: ಬಿಜೆಪಿಯಲ್ಲಿ ಆಕ್ರೋಶ

ಶಿವಮೊಗ್ಗ ಪರೋಪಕಾರಂನ ಶ್ರೀಧರ್ ಎನ್.ಎಂ. ಮಾತನಾಡಿ, “ಪಾಪ- ಪುಣ್ಯ ಎರಡೂ ನಮ್ಮ ಅಂತರಂಗದಲ್ಲಿವೆ. ಪ್ರತಿಯೊಬ್ಬರೂ ಪುಣ್ಯ ಕಾರ್ಯದ ಫಲ ಬಯಸುತ್ತಾರೆ. ಆದರೆ ಪಾಪಗಳನ್ನು ಮಾಡುತ್ತಲೇ ಇರುತ್ತಾರೆ. ಸುಖವು ಪುಣ್ಯದ ಹಾಗೂ ಪಾಪವು ದುಃಖದ ಫಲವಾಗಿದೆ. ಸಾತ್ವಿಕ ಗುಣಗಳಿಂದ ಮನಸ್ಸು ಪರಿಶುದ್ಧವಾಗಿರುತ್ತದೆ ಮತ್ತು ನಿಯಂತ್ರಣದಲ್ಲಿರುತ್ತದೆ. ಸತ್ಸಂಗದ ಮೂಲಕ ಶುದ್ಧ ಮನಸ್ಸು ಹಾಗೂ ಆತ್ಮ ಸಾಕ್ಷಾತ್ಕಾರವನ್ನು ಹೊಂದಬಹುದು” ಎಂದರು.

ನಿಕಟಪೂರ್ವ ತಹಸೀಲ್ದಾರ್ ಕವಿರಾಜ್, ಇನ್ಸ್‌ಪೆಕ್ಟರ್ ಬಸವರಾಜ್, ಶಿಕಾರಿಪುರ ಪರೋಪಕಾರಂ ತಂಡದ ಕೆ.ಎಚ್. ಲಕ್ಷ್ಮಣ್, ಮಧುಕೇಶ್ವರ, ಲಯನ್ಸ್ ಪ್ರಶಾಂತ್, ಮಹೇಶ್ವರ ಸ್ವಾಮಿ, ಆನಂದ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆ ನೇತ್ರಾವತಿ, ಮಾಜಿ ಸೈನಿಕ ರೇವಣಸಿದ್ದಪ್ಪ, ವಿಕಲಚೇತನ ಗುಡದಯ್ಯ, ಅಗ್ನಿಶಾಮಕ ದಳದ ಎಚ್.ಮಹಮದ್ ನೂರುಲ್ಲಾ, ಆರೋಗ್ಯ ಇಲಾಖೆಯ ಎಸ್.ಪ್ರವೀಣ್ ಕುಮಾರ್, ಮೇಸ್ತ್ರಿ ಪರಶುರಾಂ, ಪೊಲೀಸ್ ಇಲಾಖೆಯ ಕೊಟ್ರೇಶ್, ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಮತ್ತಿತರರನ್ನು ಸನ್ಮಾನಿಸಲಾಯಿತು. ನೇತ್ರದಾನ ನೋಂದಣಿ ಅಭಿಯಾನದಲ್ಲಿ 198 ಮಂದಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿದರು. ಕಾಶಿಬಾಯಿ ಸ್ವಾಗತಿಸಿ, ದೈಹಿಕ ಶಿಕ್ಷಕ ಮಂಜುನಾಥ್ ಸ್ವಾಗತಿಸಿ, ಡಿ.ಡಿ.ಶಿವಕುಮಾರ್ ವಂದಿಸಿದರು.

ಇದನ್ನೂ ಓದಿ: Covid Origin: ಪ್ರಾಣಿಗಳಿಂದಲೇ ಮನುಷ್ಯರಿಗೆ ತಗುಲಿದ ಕೋವಿಡ್ ಸೋಂಕು!

Exit mobile version