Site icon Vistara News

Padma Awards 2023: ಕೊಡಗಿನ ಉಮ್ಮತ್ತಾಟ್ ನೃತ್ಯ ಕಲಾವಿದೆ ರಾಣಿ ಮಾಚಯ್ಯಗೆ ಪದ್ಮಶ್ರೀ ಪ್ರಶಸ್ತಿ

Padma Awards 2023

ಕೊಡಗು: ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿಗಳನ್ನು (Padma Awards 2023) ಪ್ರಕಟಿಸಿದ್ದು, ಈ ಪೈಕಿ ರಾಜ್ಯದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಈ ಪೈಕಿ ಉಮ್ಮತ್ತಾಟ್ ಜಾನಪದ ನೃತ್ಯ ಕಲಾವಿದೆ ರಾಣಿ ಮಾಚಯ್ಯ ಅವರು ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಜಿಲ್ಲೆಯ ಮಡಿಕೇರಿಯಲ್ಲಿ ನೆಲೆಸಿರುವ ರಾಣಿ ಮಾಚಯ್ಯ ಅವರು ಮಹಿಳೆಯರಿಗೆ ಸಾಂಪ್ರದಾಯಿಕ ಉಮ್ಮತ್ತಾಟ್ ನೃತ್ಯ ಕಲಿಸುವ ಮೂಲಕ ಜನಪ್ರಿಯವಾಗಿದ್ದಾರೆ. ಈ ಹಿರಿಯ ಕಲಾವಿದೆ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಜಾನಪದ ನೃತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಕೊಡವ ಜನಾಂಗದ ಜಾನಪದ ನೃತ್ಯವಾದ ಉಮ್ಮತ್ತಾಟ್‌ ಅನ್ನು ಯುವತಿಯರು, ಮಹಿಳೆಯರಿಗೆ ಕಲಿಸಿಕೊಟ್ಟಂತಹ ಹೆಗ್ಗಳಿಕೆ ರಾಣಿಮಾಚಯ್ಯರಿಗೆ ಸಲ್ಲುತ್ತದೆ. ಅಷ್ಟುಮಾತ್ರವಲ್ಲ ಹಲವು ಯುವತಿಯರು ಹಾಗೂ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಜಾನಪದ ನೃತ್ಯ ತಂಡವನ್ನು ಕಟ್ಟಿ ಕೊಡಗಿನ ಕೊಡವ ಜನಾಂಗ ಉಮ್ಮತ್ತಾಟ್‌ ಅನ್ನು ದೇಶ ಮಟ್ಟದಲ್ಲಿ ಪ್ರದರ್ಶನ ನೀಡಿದ ಕೀರ್ತಿ ರಾಣಿ ಮಾಚಯ್ಯರಿಗೆ ಸಲ್ಲುತ್ತದೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿ ನ ಸಿದ್ದಾಪುರದಲ್ಲಿ 1943ರ ಏಪ್ರಿಲ್ 4 ರಂದು ಕಟ್ರತಂಡ ಮೇದಪ್ಪ ಹಾಗೂ ತಾಯ್ಯಮ್ಮರ ಪುತ್ರಿಯಾಗಿ ಜನಿಸಿದ ಇವರು, ಐಮುಡಿಯಂಡ ಮನೆತನದಲ್ಲಿ ಮದುವೆಯಾದರು. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ನೀಡುವ ಮೂಲಕ ತಮ್ಮ ಕಲೆಯನ್ನು ಇವರು ಅನಾವರಣಗೊಳಿಸಿದ್ದಾರೆ. ಕರ್ನಾಟಕ 10 ಕಡೆಗಲ್ಲಿ ತಮ್ಮ ತಂಡವನ್ನು ಕಟ್ಟಿಕೊಂಡು ಪ್ರದರ್ಶನ ನೀಡಿದ್ದಾರೆ. ಅದನ್ನು ಹೊರತುಪಡಿಸಿ ಗೋವಾದಲ್ಲಿ ನಡೆದ ಕರ್ನಾಟಕ ಉತ್ಸವದಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ್ದಾರೆ.

ಹೆಚ್ಚಾಗಿ ಇವರು ಕಾಲೇಜು ವಿದ್ಯಾರ್ಥಿಗಳನ್ನು ತಂಡದಲ್ಲಿ ಇರಿಸಿಕೊಂಡು ಪ್ರದರ್ಶನ ನಿಡುತ್ತಾ ಬಂದಿದ್ದು, ಸುಮಾರು ಮೂವತ್ತು, ನಲವತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಮ್ಮತ್ತಾಟ್ ಕಲಿಸುತ್ತಾ ಬಂದಿದ್ದಾರೆ. ಇಷ್ಟು ವರ್ಷಗಳಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ಈ ಕೊಡವ ಜಾನಪದ ನೃತ್ಯವನ್ನು ಕಲಿಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ 7 ಬಾರಿ ನೃತ್ಯ ಕಲೆ ಪ್ರದರ್ಶಿಸಿದ್ದು, ಬೆಸ್ಟ್ ಟ್ರೂಫ್ ಅವಾರ್ಡ್ ಕೂಡ ಲಭಿಸಿದೆ‌.

ಇದನ್ನೂ ಓದಿ | Padma Awards 2023: ʼತಮಟೆಯ ತಂದೆʼ ಮುನಿವೆಂಕಟಪ್ಪಗೆ ಪದ್ಮಶ್ರೀ ಪ್ರಶಸ್ತಿ

ಇವರು ಕೇವಲ ಉಮ್ಮತ್ತಾಟ್ ಮಾತ್ರ‌ವಲ್ಲದೆ ಕೋಲಾಟ ಸೇರಿ ಹಲವು ಜಾನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶನ ನೀಡುತ್ತಿದ್ದರು‌‌. ರಾಜ್ಯ, ದೇಶದ ವಿವಿಧ ಭಾಗಗಳಲ್ಲಿ ಇವರ ಪ್ರತಿಭೆಗೆ ಸಾಕಷ್ಟು ಬಹುಮಾನಗಳು ಲಭಿಸಿವೆ. ಇವರ ಸಾಧನೆಗೆ ರಾಜೋತ್ಸವ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಇದೀಗ ಭಾರತ ಸರ್ಕಾರ ಇವರ ಸಾಧನೆ ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ‌.

ಪದ್ಮಶ್ರೀ ಪ್ರಶಸ್ತಿ ಲಭಿಸಿರುವ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಪ್ರತಿಕ್ರಿಯಿಸಿರುವ ರಾಣಿ ಮಾಚಯ್ಯ ಅವರು, ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಬಹಳ ಸಂತೋಷವಾಗಿದೆ‌. ನಾನು ಯಾವುದೇ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ, ನನ್ನ ಈ ಕಲೆಯ ಸಾಧನೆ ಗುರುತಿಸಿ ಭಾರತ ಸರ್ಕಾರವೇ ಪ್ರಶಸ್ತಿ ನೀಡಿರುವುದು ಬಹಳ ಸಂತೋಷ ತಂದಿದೆ. ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಹಲವರಿಂದ ಸಾಕಷ್ಟು ಕರೆಗಳು ಬರುತ್ತಿದ್ದು, ಅಭಿನಂದನೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version