Site icon Vistara News

Pahani Patra: ಅರಣ್ಯ ಅತಿಕ್ರಮಣದಾರರಿಗೆ ಪಹಣಿ ಪತ್ರ; ರಾಷ್ಟ್ರಪತಿಗೆ ಮನವಿ ಸಲ್ಲಿಕೆ

Pahani Patra prptest mundagoda

#image_title

ಮುಂಡಗೋಡ: ಅರಣ್ಯ ಅತಿಕ್ರಮಣದಾರರಿಗೆ ಕಂದಾಯ ಇಲಾಖೆಯಿಂದ ಕೂಡಲೇ ಪಹಣಿ ಪತ್ರ ವಿತರಣೆ (Pahani Patra) ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಸೀಲ್ದಾರ್ ಮುಖಾಂತರ ರಾಷ್ಟ್ರ ಪತಿಗೆ ಸೋಮವಾರ (ಫೆ.೨೭) ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಹಲವಾರು ದಶಕಗಳಿಂದ ರೈತರು ಅರಣ್ಯ ಭೂಮಿ ಅತಿಕ್ರಮಣ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಂತಹ ಅತಿಕ್ರಮಣ ಭೂಮಿ ಮಂಜೂರಿಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಅತಿಕ್ರಮಣದಾರರು ಭೂಮಿಯ ಹಕ್ಕು ಹೊಂದದೆ, ಹಾಗೇ ಉಳಿದಿದ್ದಾರೆ. ಕೂಡಲೇ ಕಂದಾಯ ಇಲಾಖೆಯಿಂದ ಅತಿಕ್ರಮಣದಾರರಿಗೆ ಪಹಣಿ ಪತ್ರಿಕೆ ನೀಡುವ ವ್ಯವಸ್ಥೆಯನ್ನು ಮಾಡಬೇಕು. ದಿನ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ೩೨೦ ರೂಪಾಯಿ ಇದ್ದಿರುವುದು ಈಗ ೧೧೦೦ ರೂ. ದಾಟಿದೆ. ಇದರಿಂದ ಬಡ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕ ಬಡ ಜನರು ಸಿಲಿಂಡರ್‌ ಖರೀದಿಸಲು ಸಾಧ್ಯವಾಗುತ್ತಿಲ್ಲ. ಸಿಲಿಂಡರ್ ಬೆಲೆಯನ್ನು ತಕ್ಷಣವೇ ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿಯ ಪ್ರತಿಯೊಬ್ಬ ಸದಸ್ಯರಿಗೆ ಈ ಮೊದಲು ಹತ್ತು ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಆದರೆ, ಈಗ ೫ ಕೆಜಿ ವಿತರಣೆ ಮಾಡುತ್ತಿದ್ದು, ಮೊದಲಿನಂತೆ ಹತ್ತು ಕೆಜಿ ಅಕ್ಕಿ ವಿತರಣೆ ಮಾಡಬೇಕು. ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಕಾರ್ಖಾನೆಗಳನ್ನು ಆರಂಭಿಸಿ ಕೆಲಸ ನೀಡಬೇಕು ಎಂದು ಅವರು ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: KL Rahul : ಉತ್ತಮ ಪ್ರದರ್ಶನ ನೀಡದೇ ಹೋದರೆ ಟೀಕೆಗಳನ್ನು ಎದುರಿಸಲೇಬೇಕು ಎಂದ ಸೌರವ್​ ಗಂಗೂಲಿ

ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ, ರಾಜ್ಯಾಧ್ಯಕ್ಷ ಆರ್.ಕಿರಣ ಕುಮಾರ, ರಾಜ್ಯ ಕಾರ್ಯಾಧ್ಯಕ್ಷ ಆರ್.ನಾರಾಯಣ, ಭೀಮಸಿ ವಾಲ್ಮೀಕಿ, ರಾಮಚಂದ್ರ ಹರಿಜನ, ಸೋಮಶೇಖರ, ಚಳವಳಿ ವೆಂಕಟರಾಜು, ಪ್ರಸನ್ನ, ನಾಗೇಶ ಎಚ್.ಎಂ, ಮಂಜುಳಾ ಮೂಶಣ್ಣವರ, ಗೋವಿಂದಪ್ಪ ಬೆಂಡ್ಲಗಟ್ಟಿ, ಜೈತುನಬಿ ಜಿಗಳೂರ, ಮಾರ್ಟಿನ ಬಳ್ಳಾರಿ, ಮಂಜುನಾಥ ಕುರ್ತಕೋಟಿ, ಶಿವಾನಂದ ಮುಡಸಾಲಿ ಮುಂತಾದವರಿದ್ದರು.

ಇದನ್ನೂ ಓದಿ: Modi at Belagavi: ಮನೆಮನೆಗೆ ನೀರು ಕೊಡುವ ಧೈರ್ಯ ಯಾವ ಪ್ರಧಾನಿಗೂ ಇರಲಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

Exit mobile version