Site icon Vistara News

Painting Competition: ಯಲಹಂಕದ ಕೇಂದ್ರೀಯ ವಿದ್ಯಾಲಯದಲ್ಲಿ ಚಿತ್ರಕಲಾ ಸ್ಪರ್ಧೆ; 5 ವಿಜೇತರಿಗೆ ಬಹುಮಾನ ವಿತರಣೆ

Painting Competition

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ, ‘ಪರಾಕ್ರಮ ದಿನ’ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಕೇಂದ್ರೀಯ ವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ (Painting Competition) ವಿಜೇತರಾದ ಐವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗಿದೆ. ನಗರದ ಯಲಹಂಕದ ರೈಲುಗಾಲಿ ಕಾರ್ಖಾನೆಯ ಕೇಂದ್ರೀಯ ವಿದ್ಯಾಲಯದಲ್ಲಿ (Kendriya Vidyalaya, RWF, Yelahanka) ಪ್ರಾಂಶುಪಾಲೆ ಡಾ. ಪುಷ್ಪರಾಣಿ ಯಾದವ್ ಅವರು ಬಹುಮಾನವನ್ನು ವಿತರಿಸಿದರು.

ಮಹಾನ್ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಜೀವನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಲು ಮತ್ತು ಅವರಲ್ಲಿ ದೇಶಭಕ್ತಿ ಬೆಳೆಸಲು ದೇಶದ 500 ಕೇಂದ್ರೀಯ ವಿದ್ಯಾಲಯಗಳಲ್ಲಿ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಬರೆದ ‘ಪರೀಕ್ಷಾ ವಾರಿಯರ್’ ಪುಸ್ತಕವನ್ನು ಆಧರಿಸಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ವಿಷಯ ನೀಡಲಾಗಿತ್ತು.

ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ನಿಭಾಯಿಸಲು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜ.27ರಂದು ಪರೀಕ್ಷಾ ಪೆ ಚರ್ಚಾ 2023 ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಕೇಂದ್ರೀಯ ವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ರಾಷ್ಟ್ರವ್ಯಾಪಿ ಚಿತ್ರಕಲೆ ಸ್ಪರ್ಧೆ ನಡೆಸಲಾಗಿದೆ.

ಸಿಬಿಎಸ್‌ಇ ಪಠ್ಯಕ್ರಮ ಅಳವಡಿಕೆ ಶಾಲೆಗಳ ವಿದ್ಯಾರ್ಥಿಗಳು, ರಾಜ್ಯ ಮಂಡಳಿಗಳು, ನವೋದಯ ವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳ ವಿದ್ಯಾರ್ಥಿಗಳು ಈ ಅನನ್ಯ ಸೃಜನಶೀಲ ಕಲ್ಪನೆಗಳ ಅಭಿವ್ಯಕ್ತಿಯಲ್ಲಿ ವೈವಿಧ್ಯಮಯ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಈ ಸ್ಪರ್ಧೆಯಲ್ಲಿ ನಗರದದ ವಿವಿಧ ಶಾಲೆಗಳ 9ರಿಂದ 12ನೇ ತರಗತಿಯ ಸುಮಾರು 100 ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ 10 ಮಕ್ಕಳು ಕೆವಿಆರ್‌ಡಬ್ಲ್ಯುಎಫ್ ಶಾಲೆಯಿಂದ ಪಾಲ್ಗೊಂಡಿದ್ದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪೈಕಿ ಐವರು ವಿಜೇತರಿಗೆ ಯಲಹಂಕದ ರೈಲುಗಾಲಿ ಕಾರ್ಖಾನೆಯ ಕೇಂದ್ರೀಯ ವಿದ್ಯಾಲಯದ (ಕೆ.ವಿ.ಆರ್.ಡಬ್ಲ್ಯು.ಎಫ್‌) ಪ್ರಾಂಶುಪಾಲೆ ಡಾ.ಪುಷ್ಪರಾಣಿ ಯಾದವ್ ಅವರು ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕ, ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳು ಮತ್ತು ಪ್ರಮಾಣ ಪತ್ರವನ್ನು ಬಹುಮಾನವಾಗಿ ನೀಡಿದರು.

Exit mobile version