ಬೆಂಗಳೂರು: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ (ಪಿಒಕೆ) ಪ್ರಾಚೀನ ಶಾರದಾ ಸರ್ವಜ್ಞ ಪೀಠದ (Sharda Temple) ಆವರಣವನ್ನು ಪಾಕ್ ಸೇನೆಯು ಅತಿಕ್ರಮಣ ಮಾಡಿದ್ದು, ಭಾರತ ಸರ್ಕಾರ ಮಧ್ಯೆ ಪ್ರವೇಶಿಸಿ ಅತಿಕ್ರಮಣವನ್ನು ತೆರವು ಮಾಡಬೇಕು ಎಂದು ಕಾಶ್ಮೀರದ ಶಾರದಾ ದೇವಸ್ಥಾನ ರಕ್ಷಣಾ ಸಮಿತಿ (Save Sharda Committee) ಮನವಿ ಮಾಡಿದೆ.
ಈ ಬಗ್ಗೆ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಶ್ಮೀರದ ಶಾರದಾ ದೇವಸ್ಥಾನ ರಕ್ಷಣಾ ಸಮಿತಿ (ಎಸ್‌ಎಸ್‌ಸಿ) ಸಂಸ್ಥಾಪಕ ರವೀಂದರ್ ಪಂಡಿತ್ ಅವರು, ಪಿಒಕೆಯ ಶಾರದಾ ಪೀಠದ ಆವರಣದಲ್ಲಿ ಪಾಕ್ ಸೇನೆಯು ಅತಿಕ್ರಮಣ ಮಾಡಿ, ರೆಸ್ಟೋರೆಂಟ್ ಮಾಡುವ ಹುನ್ನಾರದ ಭಾಗವಾಗಿ ಕಾಫಿ ಹೋಮ್ ಆರಂಭಿಸಿದೆ. ಹೀಗಾಗಿ ಅತಿಕ್ರಮಣ ತೆರವು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ಶಾರದಾ ಪೀಠದ ಬಳಿ ಅತಿಕ್ರಮಣ ನಿಲ್ಲಿಸುವಂತೆ ಕೋರಿ 2023ರ ಜನವರಿ 3 ರಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸರ್ವೋಚ್ಚ ನ್ಯಾಯಾಲಯವು, ಸಮಿತಿಯ ಪರವಾಗಿ ತೀರ್ಪು ನೀಡಿದೆ. ಇದರ ಹೊರತಾಗಿಯೂ ಪಾಕ್ ಸೇನೆ ಅತಿಕ್ರಮಣ ಮಾಡಿದೆ. ಇದಕ್ಕೆ ಅಲ್ಲಿನ ಮುಸ್ಲಿಂ ನಾಗರಿಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಅತಿಕ್ರಮ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಶಾರದಾ ಪೀಠವನ್ನು ಯುನೆಸ್ಕೋ ಪಾರಂಪರಿಕ ತಾಣವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಎಲ್‌ಒಸಿಯಲ್ಲಿ ಬೃಹತ್ ಮೆರವಣಿಗೆ ಎಚ್ಚರಿಕೆ
ನವೆಂಬರ್ 30ರಂದು ಪಿಎಂ ನರೇಂದ್ರ ಮೋದಿ ಮತ್ತು ಪಿಒಕೆ (ಎಜೆಕೆ) ಅಧ್ಯಕ್ಷರಿಗೂ ಪತ್ರ ಬರೆಯಲಾಗಿದೆ. ಪಾಕ್ ಸೇನೆಯ ಕಾಫಿ ಹೋಮ್ ಅನ್ನು ತೆರವು ಮಾಡದಿದ್ದರೆ ನಾವು ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯಲ್ಲಿ ಮೆರವಣಿಗೆಗೆ ಕರೆ ನೀಡುತ್ತೇವೆ. ಜತೆಗೆ ಎಲ್ಒಸಿ ದಾಟಲೂ ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾರದಾ ದೇವಿ ಭಕ್ತರು ಬೃಹತ್ ಮೆರವಣಿಗೆಗೆ ಸಿದ್ಧರಾಗಿರಬೇಕು ಎಂದು ರವೀಂದರ್ ಪಂಡಿತ್ ಕರೆ ನೀಡಿದರು.
ರಾಮ ಮಂದಿರಕ್ಕೆ ಪಿಒಕೆಯ ಪವಿತ್ರ ನದಿಗಳ ಜಲ ಸಮರ್ಪಣೆ
ಮೊದಲ ಬಾರಿಗೆ ಅಯೋಧ್ಯೆ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ)ಯಲ್ಲಿರುವ ಪವಿತ್ರ ನದಿಗಳ ಜಲ ಸಮರ್ಪಣೆ ಮಾಡಲಾಗುತ್ತಿದೆ ಎಂದು ರವೀಂದರ್ ಪಂಡಿತ್ ತಿಳಿಸಿದರು. ಸರಸ್ವತಿ, ಸಿಂಧೂ, ಮಧುಮತಿ, ಕಿಶನ್ ಗಂಗಾ ಮತ್ತಿತರ ನದಿಗಳಿಂದ ಸಂಗ್ರಹಿಸಲಾದ ಪವಿತ್ರ ಜಲವನ್ನು ಸಮಿತಿಯ ಮಂಜುನಾಥ ಶರ್ಮ ನೇತೃತ್ವದ ತಂಡ ಅಯೋಧ್ಯೆಗೆ ತಲುಪಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | Ayodhya Ram Mandir: ಕಾಶಿಯ ಭಿಕ್ಷುಕರಿಂದ ಅಯೋಧ್ಯೆ ರಾಮ ಮಂದಿರಕ್ಕೆ ರೂ.4 ಲಕ್ಷ ದೇಣಿಗೆ!
ಸಮಿತಿಯು ಶಾರದಾ ದೇವಿ ಅನುಯಾಯಿಗಳು ಮತ್ತು ಪ್ರವಾಸಿಗಗರ ಅನುಕೂಲಕ್ಕಾಗಿ ಕಾಶ್ಮೀರದ ಟೀಟ್ವಾಲ್ ಶಾರದಾ ಯಾತ್ರಾ ದೇವಸ್ಥಾನದ ವೆಬ್‌ಸೈಟ್ ಅನ್ನು ಪ್ರಾರಂಭಿಸಿತು. ಸಮಿತಿಯ ಸ್ಥಳೀಯ ಮುಖಂಡ ಮಂಜುನಾಥ ಶರ್ಮ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ, ಮುಖಂಡ ಪಟಾ ಪಟ್ ಶ್ರೀನಿವಾಸ್, ವಿವೇಕ್ ಮುಂತಾದವರು ಇದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ