ಬೆಂಗಳೂರು: ಎಷ್ಟೇ ಹೋರಾಟ ಮಾಡಿದರೂ ಸರಕಾರ ಪಂಚಮಸಾಲಿಗಳಿಗೆ ೨ಎ ಮೀಸಲಾತಿ ನೀಡುತ್ತಿಲ್ಲ ಎಂದು ಸಿಟ್ಟಿಗೆದ್ದಿರುವ ಸಮುದಾಯದ ನಾಯಕರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ತಮ್ಮ ಆಕ್ರೋಶ ಹೊರಹಾಕಿದರು.
ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಆಮಿಸಿದ ಸಚಿವ ಸಿ.ಸಿ ಪಾಟೀಲ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ ಜತೆ ಸಿಎಂ ಬೊಮ್ಮಾಯಿ ಮಾತನಾಡಿದರು. ಡಿಸೆಂಬರ್ ೧೨ರಂದು ನಿಗದಿಯಾಗಿದ್ದ ವಿಧಾನಸೌಧ ಮುತ್ತಿಗೆಯನ್ನು ಕೈಬಿಡುವಂತೆ ಒತ್ತಾಯಿಸಿದರು.
ಸಿಎಂ ಅವರ ಮಾತಿಗೆ ಒಪ್ಪಿದ ನಿಯೋಗ ಡಿಸೆಂಬರ್ ೧೯ರೊಳಗೆ ಕುಲ ಶಾಸ್ತ್ರೀಯ ಅಧ್ಯಯನ ವರದಿಯನ್ನು ಪಡೆಯಬೇಕು. ಪಡೆಯದಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಮುತ್ತಿಗೆ ಹಾಕುವುದಾಗಿ ಇನ್ನೊಂದು ಡೆಡ್ ಲೈನ್ ವಿಧಿಸಿದೆ.
ಇನ್ನೊಂದು ಗಡುವು ಕೊಟ್ಟಿದ್ದೇವೆ
ರೇಸ್ ಕೋರ್ಸ್ ಬಳಿಯ ಸರ್ಕಾರಿ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ಡಿಸೆಂಬರ್ 19ರೊಳಗೆ ಕುಲ ಶಾಸ್ತ್ರ ಅಧ್ಯಯನ ವರದಿ ಪಡೆಯಬೇಕು/ ಇಲ್ಲವಾದಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಡೆಡ್ ಲೈನ್ ನೀಡಿದ್ದೇವೆ ಎಂದರು.
ʻʻಕಳೆದ ಎರಡು ವರ್ಷಗಳಿಂದ ಮೀಸಲಾತಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಡಿಸೆಂಬರ್ 12ಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದೆವು. ವಿಧಾನಸೌದಕ್ಕೆ ಮುತ್ತಿಗೆ ಹಾಕಲು ರೆಡಿ ಆಗಿದ್ದೆವು. ಆದ್ರೆ ನಮ್ಮ ಸಮುದಾಯದವರ ಬೇಡಿಕೆಯಂತೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೆವು. ಈ ವೇಳೆ 12ನೇ ತಾರೀಕು ಮುತ್ತಿಗೆ ಹಾಕಬೇಡಿ ಅಂತಾ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಆದ್ರೆ ನಾವು ಡಿ.19ರ ಒಳಗೆ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಳ್ಳೋಕೆ ಗಡುವು ಕೊಟ್ಟಿದ್ದೇವೆ. ಇಲ್ಲವಾದರೆ ನಾವು ಅಧಿವೇಶನದ ದಿನ ಬೆಳಗಾವಿಯಲ್ಲಿ ಮುತ್ತಿಗೆ ಹಾಕುತ್ತೇವೆ. ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನ ವೇಳೆ ಪ್ರತಿಭಟನೆ ನಡೆಸುತ್ತೇವೆʼʼ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.
ದಾರಿ ತಪ್ಪಿಸಿದರೆ ಹುಷಾರ್
ʻʻನಮ್ಮನ್ನು ದಾರಿ ತಪ್ಪಿಸುವ ಕೆಲಸ ಏನಾದರೂ ಮಾಡಿದದರೆ ಮುಂದೆ ಏನಾಗುತ್ತದೆ ಅಂತಾ ಸಿಎಂಗೆ ಗೊತ್ತಿದೆ. ಎಲೆಕ್ಷನ್ ನಲ್ಲಿ ಸಮಸ್ಯೆ ಎದುರಾಗುತ್ತವೆ ಅನ್ನೋದ್ರ ಬಗ್ಗೆ ಅರಿವಿದೆ. ಅವರೂ ಕೂಡ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ವರದಿ ತರಿಸಿಕೊಳ್ತೀವಿ ಅಂತಾ ಭರವಸೆ ನೀಡಿದ್ದಾರೆ.. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ನಮ್ಮ ಸಮುದಾಯದ ಲಕ್ಷಾಂತರ ಜನರಿಂದ ಮುತ್ತಿಗೆ ಹಾಕುತ್ತೇವೆ. ಕಾನೂನು ರೀತಿಯಲ್ಲಿ ನ್ಯಾಯ ಒದಗಿಸಲು ಅವಕಾಶ ನೀಡಿದ್ದೇವೆ. ಅದನ್ನ ಮರೆತು ನಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡಿದರೆ ಮುಂದೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆʼʼ ಎಂದು ರಾಜ್ಯ ಸರ್ಕಾರಕ್ಕೆ ಜಯಮೃತ್ಯುಂಜಯ ಸ್ಚಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Panchamasali Reservation | ಬೊಮ್ಮಾಯಿ ಸರ್ಕಾರ 2A ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸವಿದೆ: ವಚನಾನಂದ ಸ್ವಾಮೀಜಿ