ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡಲೇಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದ ಕೂಡಲ ಸಂಗಮ ಪೀಠದ ಶ್ರೀ ಬಸವ ಮೃತ್ಯುಂಜಯ ಶ್ರೀಗಳು, ಪಕ್ಷ ಮತ್ತು ಸರ್ಕಾರ ವಿರುದ್ಧವೇ ಮಾತನಾಡುತ್ತಿರುವ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ. ಜತೆಗೆ, ಜಾತಿ ರಾಜಕಾರಣದಲ್ಲಿ ಕಾಂಗ್ರೆಸ್ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದೂ ಬೊಮ್ಮಾಯಿ ಆರೋಪಿಸಿದರು.
ಶನಿವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಎಲ್ಲಾ ಸಮುದಾಯವನ್ನು ಸಮನಾಗಿ ನೋಡಬೇಕು ಹಾಗೂ ನ್ಯಾಯ ನೀಡಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಕಾಯಬೇಕಾಗಿದೆ ಎಂದು ಹೇಳಿದರು.
ನಾನು ಕಾಲ ಮಿತಿ ನಿಗದಿ ಮಾಡಿಲ್ಲ
ʻʻನಾನು ಮೀಸಲಾತಿ ವಿಚಾರದಲ್ಲಿ ಕಾಲ ಮಿತಿ ನಿಗದಿ ಮಾಡಿಲ್ಲ. ಅವರೇ ಮಾಡಿದ್ದು. ಅವರು ಕೊಟ್ಟ ಒಂದು ವಾರದಲ್ಲಿಯೇ ನಾವು ತೀರ್ಮಾನ ಕೈಗೊಂಡಿದ್ದೇವೆʼʼ ಎಂದು ಹೇಳಿದರು ಬೊಮ್ಮಾಯಿ.
2016ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು, ಸಿದ್ದರಾಮಯ್ಯ ಮುಖ್ಯಮಂತ್ರಿಗಳಿದ್ದರು. ಕಾಂತರಾಜ ಸಮಿತಿ ಇವರ ಅರ್ಜಿಯನ್ನು ತಿರಸ್ಕರಿಸಿತು. 2ಎ ನೀಡಲಾಗುವುದಿಲ್ಲ 3ಬಿನಲ್ಲಿಯೇ ಇರಬೇಕು ಎಂದು ಆದೇಶವಾಗಿದೆ ಎಂದು ಹೇಳಿತ್ತು. 2016ರಿಂದ 18ರವರೆಗೆ ಅವರದ್ದೇ ಸರ್ಕಾರವಿತ್ತು. ಆಗ ಪ್ರಶ್ನೆ ಕೇಳದ ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪವನರ್ ಈಗ ಏಕೆ ಕೇಳುತ್ತಾರೆ? ಅವರಿಗೆ ಯಾವ ನೈತಿಕ ಹಕ್ಕಿದೆ. ಕಾಂಗ್ರೆಸ್‌ನವರು ಈ ಜಾತಿ ರಾಜಕಾರಣದಲ್ಲಿ ತಮ್ಮ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಬೊಮ್ಮಾಯಿ ಅವರು, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಅವರ ಅಕ್ಕಪಕ್ಕದಲ್ಲಿರುವವರಿಗೆ ಅವರು ಇದ್ದಾಗ ಏನು ಮಾಡಿದರು ಎಂಬ ಪ್ರಶ್ನೆ ಕೇಳಬೇಕು. ಅದು ಬಿಟ್ಟು ಈ ರೀತಿಯ ವಿಷಮ ವಾತಾವರಣ ಸೃಷ್ಟಿ ಸುವುದು ಸರಿಯಲ್ಲ ಎಂದರು.
ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಮುರುಗೇಶ್ ನಿರಾಣಿ ಅವರನ್ನು ಪಿಂಪ್ ಎಂದು ಕರೆದಿರುವುದನ್ನು ಆಕ್ಷೇಪಿಸಿದ ಅವರು ವೈಯಕ್ತಿಕ ನಿಂದನೆ ಮಾಡುವುದು ಕರ್ನಾಟಕದ ರಾಜಕೀಯ ಸಂಸ್ಕೃತಿಯಲ್ಲ ಎಂದರು. ವಿಷಯಾಧಾರಿತ ಭಿನ್ನಾಭಿಪ್ರಾಯ ಇರಬೇಕು. ಆದರೆ ವೈಯಕ್ತಿಕ ನಿಂದನೆ ಸರಿಯಲ್ಲ. ಅದಕ್ಕೆ ಹೊರತಾಗಿ ಮಾತನಾಡಿದರೆ, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು. ಅದೇ ವೇಳೆ, ಸರ್ಕಾರ ಹಾಗೂ ಪಕ್ಷದ ವಿರುದ್ಧ ಮಾತನಾಡುವವರ ಬಗ್ಗೆ ಪಕ್ಷವು ಸರಿಯಾದ ನಿರ್ಧಾರ ಕೈಗೊಳ್ಳಲಿದೆ ಎಂದು ಯತ್ನಾಳ್ ಅವರ ಹೆಸರು ಉಲ್ಲೇಖಿಸದೆಯೇ ಹೇಳಿದರು.
ಎಸ್ಕಾಂ ಗಳನ್ನು ಸಾಲದ ಸುಳಿಗೆ ನೂಕಿದ ಕಾಂಗ್ರೆಸ್
ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ಈಗಾಗಲೇ ಎಸ್ಕಾಮ್ ಗಳನ್ನು ಸಾಲದ ಶೂಲಕ್ಕೆ ನೂಕಿದ್ದಾರೆ. ಅವುಗಳಿಗೆ ನೇರವಾಗಿ 8 ಸಾವಿರ ಕೋಟಿ ರೂ. ನೀಡಿದ್ದೇವೆ.
13 ಸಾವಿರ ಕೋಟಿ ರೂ.ಗಳಿಗೆ ಗ್ಯಾರಂಟಿ ಕೊಟ್ಟು ಸಾಲ ಪಡೆಯಲಾಗಿದೆ. ಅಂದರೆ 21 ಸಾವಿರ ಕೋಟಿ ರೂ. ಎಸ್ಕಾಂ ಮತ್ತು ಇಂಧನ ಕ್ಷೇತ್ರದಲ್ಲಿ ತೊಡಗಿಸಿದ್ದರಿಂದ ಅವು ಜೀವಂತವಾಗಿವೆ. ಇದು ಕಾಂಗ್ರೆಸ್ ಕಾಣಿಕೆ. ಅವರು ಬಿಟ್ಟು ಹೋದ ಬಳುವಳಿ. ಈಗ ಮತ್ತೆ ಚುನಾವಣೆ ಯಲ್ಲಿ ಸೋಲುತ್ತೇವೆ ಎಂದು ಗೊತ್ತಾಗಿ ಹತಾಶರಾಗಿ ಈ ರೀತಿ ಘೋಷಣೆಗಳನ್ನು ಮಾಡಿದ್ದಾರೆ. ಅವರಿಗೆ ಇದ್ಯಾವುದೂ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ ಎಂದರು.
ಇದನ್ನೂ ಓದಿ | Panchamasali Reservation | ಪದೇಪದೆ ಗಡುವು ನೀಡುವ ಸ್ವಾಮೀಜಿ, ಯತ್ನಾಳ್ ವಿರುದ್ಧ ಸಿ.ಸಿ ಪಾಟೀಲ್, ನಿರಾಣಿ ಆಕ್ರೋಶ