Site icon Vistara News

Panchamasali reservation : ನಾಳೆ ಪಂಚಮಸಾಲಿ ಸಮುದಾಯಕ್ಕೆ ಮೀಸಲು ಕೊಡುಗೆ; ವಚನಾನಂದ ಸ್ವಾಮೀಜಿ ವಿಶ್ವಾಸ

Panchamasali Vachanananda swameeji

#image_title

ಬೆಂಗಳೂರು: ಹರಿಹರ ಪಂಚಮಸಾಲಿ ಪೀಠದ ಸತತ ಹೋರಾಟದ ಫಲವಾಗಿ ಮಾರ್ಚ್‌ 24ರಂದು ಪಂಚಮಸಾಲಿ ಸಮುದಾಯಕ್ಕೆ (Panchamasali reservation)ರಾಜ್ಯ ಸರಕಾರದಿಂದ ಅತ್ಯುತ್ತಮ ಕೊಡುಗೆ ಘೋಷಣೆಯಾಗುವ ವಿಶ್ವಾಸವಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಅವರು ಗುರುವಾರ (ಮಾರ್ಚ್‌ 23) ಬೆಂಗಳೂರು ನಗರದ ಶ್ವಾಸ ಯೋಗ ಕೇಂದ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವುದರ ಹೋರಾಟದ ಹಿಂದೆ 3 ದಶಕಗಳ ಇತಿಹಾಸವಿದೆ. ಹಂತಹಂತಗಳಲ್ಲಿ ನಡೆಸಿದ ಹೋರಾಟ ಅಂತಿಮ ಹಂತ ತಲುಪಿದೆ ಎಂದರು.

ʻʻ2ಡಿ ಹಾಗೂ 2ಸಿ ಮೀಸಲಾತಿಯನ್ನು ಘೋಷಣೆ ಮಾಡಿದ್ದನ್ನು ನಾವು ಸ್ವಾಗತಿಸುವುದಾಗಲಿ ಅಥವಾ ತಿರಸ್ಕರಿಸುವುದಾಗಲಿ ಮಾಡಿರಲಿಲ್ಲ. ಈ ಘೋಷಣೆಯಲ್ಲಿ ಸ್ಪಷ್ಟತೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದೆವು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಪಡೆದುಕೊಂಡಿದೆ. ಮಧ್ಯಂತರ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಪ್ರವರ್ಗ ಯಾವುದಾರೂ ಇರಲಿ ಆದರೆ ನಮ್ಮ ಸಮುದಾಯಕ್ಕೆ ಮೀಸಲಾತಿ ದೊರೆಯುವುದು ಬಹಳ ಅಗತ್ಯ. ಅದಕ್ಕೆ ಬೇಕಾದಂತಹ ಪೂರಕ ವಾತಾವರಣ ಈಗ ಸಿದ್ದವಾಗಿದೆ. ಆಯೋಗದ ಮಧ್ಯಂತರ ವರದಿ ಹಾಗೂ ಇಂದಿನ ಹೈಕೋರ್ಟ್‌ನಲ್ಲಿನ ಪಿಐಎಲ್‌ ಕುರಿತ ತೀರ್ಪು ಬಹುದೊಡ್ಡ ಬೆಳವಣಿಗೆಗಳಾಗಿವೆʼʼ ಎಂದರು.

ಪಂಚಮಸಾಲಿ ಮೀಸಲಾತಿ ಹೋರಾಟದ ಕಾನೂನಾತ್ಮಕ ಹೋರಾಟದ ಮುಂಚೂಣಿಯಲ್ಲಿರುವ ವಕೀಲರಾದ ಬಿ.ಎಸ್‌ ಪಾಟೀಲ್‌ ಅವರು ಮಾತನಾಡಿ, ʻʻಮಧ್ಯಂತರ ವರದಿಯ ನಂತರ ಆಯೋಗ ಮತ್ತೊಮ್ಮೆ ದಾಖಲೆಗಳ ಸಲ್ಲಿಕೆಗೆ ಅವಕಾಶ ಕಲ್ಪಿಸಿತು. ಈ ಸಂದರ್ಭದಲ್ಲಿ ನಾವು 1871ರಿಂದ ಇದುವರೆಗಿನ ಸುಮಾರು 900 ಪುಟಗಳಷ್ಟು ದಾಖಲೆಯನ್ನ ಸಲ್ಲಿಸಿದ್ದೇವೆ. 1871ರ ವರದಿಯಲ್ಲಿ ಪಂಚಮಸಾಲಿ ಸಮುದಾಯವನ್ನು ಶೂದ್ರರ ಗುಂಪಿನಲ್ಲಿ ಸೇರಿಸಿದ್ದರ ದಾಖಲೆಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಈ ಹಿನ್ನಲೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ನೇತೃತ್ವದಲ್ಲಿ ನಡೆದಂತಹ ಕಾನೂನಾತ್ಮಕ ಹೋರಾಟಕ್ಕೆ ಜಯ ಸಿಗುವ ಸುಸಂದರ್ಭ ಬಂದೊದಗಿದೆʼʼ ಎಂದು ಹೇಳಿದರು.

ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಸಾಧ್ಯತೆ

ಮಾರ್ಚ್‌ 24ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಮೀಸಲಾತಿಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳ ಹಿಂದೆ ಈ ನಿಟ್ಟಿನಲ್ಲಿ ಸಂಕೇತವನ್ನು ನೀಡಿದ್ದಾರೆ. ರಾಜ್ಯದ ಕೆಲವು ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿದೆ, ಹೈಕಮಾಂಡ್‌ ಕೂಡಾ ಕೆಲವು ಸಲಹೆಗಳನ್ನು ನೀಡಿದೆ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ ಸಿಹಿ ಸುದ್ದಿ ಸಿಗಲಿದೆ ಎಂದು ಸಿಎಂ ಹೇಳಿದ್ದರು.

ಇದನ್ನೂ ಓದಿ : Panchamasali Reservation: ಮಾ. 24ಕ್ಕೆ ಸಿಹಿ ಸುದ್ದಿ ಸಾಧ್ಯತೆ; ಪಿಎಂ ಕಚೇರಿಯಿಂದ ಕರೆ ಬಂದಿದೆ ಎಂದರು ಬಸವ ಜಯಮೃತ್ಯುಂಜಯ ಶ್ರೀ

Exit mobile version