ಬೆಂಗಳೂರು: ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನೇ (OPS) ಮರು ಸ್ಥಾಪಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪರಾಮರ್ಶೆ ಹಾಗೂ ಸುಧಾರಣೆಗಾಗಿ ಕೇಂದ್ರ ಹಣಕಾಸು ಸಚಿವಾಲಯವು ನಾಲ್ವರು ಸದಸ್ಯರ ಸಮಿತಿಯನ್ನು (NPS Committee) ರಚಿಸಿದೆ. ಹಾಗಾಗಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
“ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಸಾಧಕ – ಬಾಧಕಗಳ ಕುರಿತು ಪರಾಮರ್ಶೆ ನಡೆಸಲು ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿದೆ. ಸರ್ಕಾರಿ ನೌಕರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ, ನೌಕರರ ಪರವಾಗಿ ತೀರ್ಮಾನ ತೆಗೆದುಕೊಂಡ ಕೇಂದ್ರ ಸರ್ಕಾರಕ್ಕೆ ಕೃತ್ಯಜ್ಞತೆ ಸಲ್ಲಿಸುತ್ತೇನೆ” ಎಂದು ಅರುಣ ಶಹಾಪೂರ ಹೇಳಿದ್ದಾರೆ. ಕರ್ನಾಟಕದಲ್ಲೂ ಒಪಿಎಸ್ ಜಾರಿಗಾಗಿ ಭಾರಿ ಪ್ರತಿಭಟನೆ ನಡೆದಿವೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಆಗಬೇಕಾದ ಮಾರ್ಪಾಡುಗಳು, ಈಗಿರುವ ರಚನಾ ವ್ಯವಸ್ಥೆಯಲ್ಲಿ ಮಾಡಬಹುದಾದ ಬದಲಾವಣೆ, ತರಬಹುದಾದ ಸುಧಾರಣೆ, ಇದರಿಂದ ಕೇಂದ್ರ ಸರ್ಕಾರಕ್ಕೆ ಆಗುವ ವೆಚ್ಚ, ರಾಜ್ಯಗಳ ಜತೆ ಮಾತುಕತೆ ನಡೆಸುವುದು, ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಿಸುವುದು, ಪಿಂಚಣಿ ವ್ಯವಸ್ಥೆ ಸುಧಾರಣೆಗೆ ನೂತನ ರಚನೆ ಕುರಿತು ಚಿಂತನೆ ಸೇರಿ ಹಲವು ದಿಸೆಯಲ್ಲಿ ಸಮಿತಿಯು ಕಾರ್ಯನಿರ್ವಹಿಸಲಿದೆ.
2004ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು (OPS) ಸ್ಥಗಿತಗೊಳಿಸಿ ನೂತನ ಪಿಂಚಣಿ ಯೋಜನೆಯನ್ನು (NPS)ಪರಿಚಯಿಸಿತು. ಹಳೆಯ ವಿಧಾನದಲ್ಲಿ, ಪಿಂಚಣಿಯು ನೌಕರನ ಕೊನೆಯ ಸಂಬಳದ ಶೇ.50ರಷ್ಟಿತ್ತು ಮತ್ತು ಸಂಪೂರ್ಣ ಮೊತ್ತವನ್ನು ಸರ್ಕಾರವು ಪಾವತಿಸುತ್ತಿತ್ತು. ಎನ್‌ಪಿಎಸ್‌ನಲ್ಲಿ ಇದು ನೌಕರರ ಕೊಡುಗೆ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇಲ್ಲಿ ಸರ್ಕಾರಿ ನೌಕರರು ತಮ್ಮ ಸಂಬಳದ 10 ಪ್ರತಿಶತವನ್ನು ನಿವೃತ್ತಿ ನಿಧಿಗೆ ನೀಡಬೇಕಾಗುತ್ತದೆ. ಪಿಂಚಣಿ ನಿಧಿಗೆ ಸರ್ಕಾರ ಶೇ.14ರವರೆಗೆ ನೀಡುತ್ತದೆ. ಹಾಗಾಗಿ, ಒಪಿಎಸ್ ಜಾರಿಗಾಗಿ ಆಗ್ರಹ ಕೇಳಿಬರುತ್ತಿವೆ.
ಇದನ್ನೂ ಓದಿ: NPS Committee: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪರಿಶೀಲನೆಗೆ ಸಮಿತಿ ರಚಿಸಿದ ಕೇಂದ್ರ, ಒಪಿಎಸ್ ಸೌಲಭ್ಯ ಸೇರ್ಪಡೆ?