ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಪದೇ ಪದೆ ಸೆಮಿಸ್ಟರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆ (Paper Leak) ಆಗುತ್ತಿದೆ. ಕಳೆದೊಂದು ವಾರದಿಂದ ಎರಡನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ಪರೀಕ್ಷೆಗೆ ಎರಡು ಗಂಟೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆಗಳು ವಾಟ್ಸ್‌ಆ್ಯಪ್ ಮೂಲಕ ಹರಿದಾಡಿವೆ. ಈ ಮೂಲಕ ನಾಲ್ಕನೇ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ಮುನ್ನೆಲೆಗೆ ಬಂದಿದೆ.
ರಾಜ್ಯಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳು ಲಿಂಕ್ ಆಗಿದ್ದು, 10 ಗಂಟೆಗೆ ನಡೆಯುವ ಪೇಪರ್ 8 ಗಂಟೆಗೆ ವಾಟ್ಸ್‌ಆ್ಯಪ್‌ನಲ್ಲಿ ಸಿಗುತ್ತಿದೆ. ಇತ್ತ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ತಿಳಿದರೂ ಬೆಂಗಳೂರು ಉತ್ತರ ವಿವಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಕಳೆದ ಸೆಮಿಸ್ಟರ್‌ನಲ್ಲೂ ಪೇಪರ್ ಲೀಕ್ ಆಗಿತ್ತು. ಪ್ರತಿ ಸಲವು ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದ್ದರೂ, ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆಯೂ ಪರೀಕ್ಷೆ ಮುಂದೂಡಿದ್ದ ಬೆಂಗಳೂರು ಉತ್ತರ ವಿವಿ
ಕಳೆದ ಮೇ 30ರಂದು ನಡೆದ ಬಿ.ಕಾಂ, ಬಿಸಿಎ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಈ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಮುಂದಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವುದನ್ನು ಜಾಮೀನು ರಹಿತ ಅಪರಾಧ ಎಂಬುದಾಗಿ ಪರಿಗಣಿಸಲಾಗುವುದೆಂದು ಸಚಿವರು ಹೇಳಿದ್ದರು. ಜತೆಗೆ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರವಹಿಸಲಾಗುವುದು ಎಂದೂ ಹೇಳಿದ್ದರು. ಆದರೆ ಪದೇಪದೆ ಬೆಂಗಳೂರು ಉತ್ತರ ವಿಶ್ವವಿದ್ಯಾಯಲದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ | ಪುನೀತ ಪರ್ವ ವೀಕ್ಷಿಸುತ್ತಲೇ ಅಸುನೀಗಿದ ಅಭಿಮಾನಿ; ಛೆ, ಇಂಥ ಮನುಷ್ಯ ಬೇಗ ಹೋಗಬಾರದಿತ್ತು ಎಂದವನೂ ಬಾರದ ಲೋಕಕ್ಕೆ ಹೋದ