ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ (Paresh Mesta) ಸಾವಿನ ಪ್ರಕರಣದ ನಂತರ ನಡೆದ ಗಲಭೆ ಸಂಬಂಧ ಶಿರಸಿಯಲ್ಲಿ ಹಲವು ಮಂದಿ ಮೇಲೆ ದಾಖಲಿಸಲಾಗಿದ್ದ ಎಲ್ಲ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ಮಂಜೂರಿ ನೀಡಿ ರಾಜ್ಯ ಸರ್ಕಾರ ನಿರ್ಣಯಿಸಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಿರಸಿಯಲ್ಲಿ ದಾಖಲಾಗಿದ್ದ 26 ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಈಗ 112 ಜನರ ಮೇಲೆ ಉಳಿದುಹೋಗಿದ್ದ 3 ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಮಾಯಕರ ಮೇಲೆ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಲು ಆಗ್ರಹಿಸಿದ್ದನ್ನು ಪರಿಗಣಿಸಿ ಈ ಕುರಿತು ರಾಜ್ಯ ಸಂಪುಟ ಸಭೆ ಸೂಕ್ತ ಆದೇಶ ಮಾಡಿದೆ ಎಂದಿದ್ದಾರೆ.
ಇದನ್ನೂ ಓದಿ: Karnataka Election : ಎ.ಟಿ. ರಾಮಸ್ವಾಮಿ ಬಿಜೆಪಿ ಸೇರ್ಪಡೆ ವಿಚಾರ ವರಿಷ್ಠರ ಮಟ್ಟದಲ್ಲಿ ಚರ್ಚೆ ಎಂದ ಗೋಪಾಲಯ್ಯ
ಹೊನ್ನಾವರದಲ್ಲಿ ಈಚೆಗೆ ವಿರೋಧಿಸಿದ್ದ ಹಿಂದು ಕಾರ್ಯಕರ್ತರು
ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಇನ್ನೂ ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಬಗ್ಗೆ ಈಚೆಗೆ ಅಂದರೆ ಜನವರಿ ೨೬ರಂದು ಶಾಸಕ ದಿನಕರ ಶೆಟ್ಟಿ ವಿರುದ್ಧ ಹೊನ್ನಾವರದಲ್ಲಿ ದಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿದ್ದರು.
ಹೊನ್ನಾವರದ ಶರಾವತಿ ಸರ್ಕಲ್‌ನಲ್ಲಿ ಸೇರಿದ್ದ ಹಿಂದು ಕಾರ್ಯಕರ್ತರು, ಬಿಜೆಪಿ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದರು. ಇಲ್ಲಿನ ಮೀನುಗಾರರು, ಹಿಂದು ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ವಿವಿಧ ಧರ್ಮದ, ಜಾತಿಗಳ ಯುವಕರು ಕಳೆದ ಐದು ವರ್ಷಗಳಿಂದ ಕೋರ್ಟ್‌ಗೆ ಅಲೆದಾಡುತ್ತಲೇ ಇದ್ದೇವೆ. ಹಿಂದುತ್ವ ಎಂದು ನಮ್ಮನ್ನು ಹುರಿದುಂಬಿಸಿ ಕೊನೆಗೆ ನಮ್ಮನ್ನು ಕೈಬಿಟ್ಟಿದ್ದಾರೆ. ಬಿಜೆಪಿ ಅಧಿಕಾರವನ್ನು ಅನುಭವಿಸಿ ನಮಗೆ ಏನು ಮಾಡಿದ್ದೀರಿ? ನಿಮಗೆ ಬೇಕಾದವರ ಕೇಸ್‌ಗಳನ್ನು ವಜಾ ಮಾಡಿಸಿಕೊಂಡಿರಿ, ಆದರೆ, ನಾವು ಮಾತ್ರ ಕೋರ್ಟ್‌ಗೆ ಇಂದಿನವರೆಗೂ ಅಲೆದಾಡುತ್ತಿದ್ದೇವೆ. ಒಬ್ಬ ಬಿಜೆಪಿ ನಾಯಕರು ನಮ್ಮ ಸಮಸ್ಯೆಯನ್ನು ಆಲಿಸಲು ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.
ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ 95 ಮಂದಿ ಮೇಲೆ ದೂರು ದಾಖಲಾಗಿತ್ತು. ಶಾಸಕ ದಿನಕರ ಶೆಟ್ಟಿ ಮೇಲೂ ಸಹ ದೂರು ದಾಖಲಾಗಿತ್ತು. ಆದರೆ, ನಮಗೆ ಓಡಾಡಲು ಸಮಸ್ಯೆಯಾಗುತ್ತಿದೆ. ನಿಮ್ಮನ್ನು ನಂಬಿ ಸಮಸ್ಯೆಗೆ ಸಿಲುಕಿದ್ದೇವೆ. ಕಾಂಗ್ರೆಸ್ ಪಕ್ಷವನ್ನೂ ಸಹ ವಿರೋಧ ಕಟ್ಟಿಕೊಂಡಿದ್ದೇವೆ. ಆದರೆ, ನಮ್ಮ ರಕ್ಷಣೆಗೆ ಮಾತ್ರ ಯಾರೂ ಬರುತ್ತಿಲ್ಲ ಎಂದು ಹಿಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈಗ ಇವರ ಪ್ರಕರಣಗಳು ಏನಾಗಿವೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಈಗ ಪರೇಶ್ ಸಾವಿನ ನಂತರ ನಡೆದ ಗಲಾಟೆ ಸಂಬಂಧ ಶಿರಸಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: Road accident : ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಸರ್ಕಾರಿ ಬಸ್ : 40ಕ್ಕೂ ಅಧಿಕ ಪ್ರಯಾಣಿಕರು ಪಾರು
ಏನಿದು ಪ್ರಕರಣ?
2017ರ ಡಿಸೆಂಬರ್ 6ರಂದು ನಾಪತ್ತೆಯಾಗಿದ್ದ ಯುವಕ ಪರೇಶ್ ಮೇಸ್ತಾ, ಡಿಸೆಂಬರ್ 8ರಂದು ಹೊನ್ನಾವರದ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆದರೆ, ಆತನ ಮೃತ ದೇಹವು ಗಾಯಗೊಂಡ ಸ್ಥಿತಿಯಲ್ಲಿದ್ದರಿಂದ ಇದನ್ನು ಕೊಲೆ ಎಂದು ಭಾವಿಸಲಾಗಿತ್ತು. ಅನ್ಯ ಕೋಮಿನ ಯುವಕರು ಕೊಲೆ ಮಾಡಿ ಹಾಕಿದ್ದಾರೆಂದು ಶಂಕೆ ವ್ಯಕ್ತವಾಗಿ ಸಾಕಷ್ಟು ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. 4 ವರ್ಷಗಳ ಸುದೀರ್ಘ ತನಿಖೆ ನಡೆಸಿದ್ದ ಸಿಬಿಐ, ೨೦೨೨ರ ಅಕ್ಟೋಬರ್ 6ರಂದು ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಈಗ ಇದರ ವಿರುದ್ಧ ಪರೇಶ್ ಮೇಸ್ತಾ ಕುಟುಂಬ ಆಕ್ಷೇಪಣೆಯನ್ನು ಸಲ್ಲಿಕೆ ಮಾಡಿದೆ. ಬಿಜೆಪಿ ಸಹ ಸಿಬಿಐ ಮರು ತನಿಖೆಗೆ ಆದೇಶವನ್ನು ನೀಡಿತ್ತು. ಇನ್ನು ಕೆಲವೇ ತಿಂಗಳಿನಲ್ಲಿ ಚುನಾವಣೆ ಎದುರಾಗಿರುವುದರಿಂದ ಪುನಃ ಈ ವಿಷಯವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.
ಸಿಬಿಐ ವರದಿಯಲ್ಲಿ ಏನಿತ್ತು?
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಯುವಕ ಪರೇಶ್ ಮೇಸ್ತಾ ಸಾಯುವುದಕ್ಕಿಂತ ಕೆಲವೇ ಗಂಟೆಗಳ ಮೊದಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ. ಆ ಬಳಿಕ ನಡೆದ ಗಲಾಟೆ ಸಂದರ್ಭದಲ್ಲಿ ಆತ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿತ್ತು. ಅಲ್ಲದೆ, ಸಾಯುವ ೨ ದಿನ ಮೊದಲು ಆತ ತನ್ನ ಮುಂಗೈ ಮೇಲೆ ಶಿವಾಜಿ ಟ್ಯಾಟೂವನ್ನು ಹಾಕಿಸಿಕೊಂಡಿದ್ದ ಎಂಬ ಅಂಶವನ್ನೂ ಉಲ್ಲೇಖಿಸಲಾಗಿದೆ. ಅಲ್ಲದೆ, ಪರೇಶ್ ಮೇಸ್ತಾ ಯಾವುದೇ ಯುವತಿಯನ್ನು ಪ್ರೀತಿಸುತ್ತಿರಲಿಲ್ಲ ಎಂಬುದನ್ನೂ ಸಹ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹಾಜರು
2017ರ ಡಿಸೆಂಬರ್ 6ರಂದು ಕುಮಟಾದಲ್ಲಿ ಕಾಂಗ್ರೆಸ್ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಇದರಲ್ಲಿ ಪರೇಶ್ ಮೇಸ್ತಾ ಭಾಗಿಯಾಗಿದ್ದ. ಮಧ್ಯಾಹ್ನ ೧೨.೩೦ರ ಸುಮಾರಿಗೆ ನಡೆದಿದ್ದ ಈ ಕಾರ್ಯಕ್ರಮವನ್ನು ಮುಗಿಸಿದ್ದ ಪರೇಶ್ ಮೇಸ್ತ ಪುನಃ ಸಂಜೆ ೫.೪೫ಕ್ಕೆ ತನ್ನ ಮನೆಗೆ ವಾಪಸ್ ಆಗಿದ್ದ. ಹೊನ್ನಾವರದಿಂದ ಕುಮಟಾ ಸುಮಾರು ೨೫ ಕಿ.ಮೀ.ನಷ್ಟು ದೂರವಿದೆ. ಅಲ್ಲಿವರೆಗೆ ತೆರಳಿ ವಾಪಸ್ ಆಗಿದ್ದರ ಬಗ್ಗೆ ಸಿಬಿಐ ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು.
ಅಲ್ಲಿಂದ ಸುಮಾರು ೬.೪೫ರಿಂದ ೭ ಗಂಟೆ ಹೊತ್ತಿಗೆ ತಾನು ಶನೇಶ್ವರ ದೇವಸ್ಥಾನಕ್ಕೆ ಹೋಗಿಬರುವುದಾಗಿ ಹೇಳಿ ಹೊನ್ನಾವರದ ತುಳಸಿ ನಗರಕ್ಕೆ ಹೋಗಿದ್ದ. ತನ್ನ ಸ್ನೇಹಿತ ಅತುಲ್ ಮೇಸ್ತಾನನ್ನೂ ಜತೆಯಲ್ಲಿ ಕರೆದೊಯ್ದಿದ್ದ. ಅಲ್ಲಿ ತಾನು ಅಯ್ಯಪ್ಪ ಮಾಲೆ ಧರಿಸಲು ಶಬರಿ ಮಲೆಗೆ ಹೋಗುತ್ತಿದ್ದೇನೆ. ಅಪ್ಪ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಸ್ನೇಹಿತನ ಬಳಿ ಹೇಳಿದ್ದಲ್ಲದೆ, ಹಾಡು ಕೇಳಲು ಸ್ನೇಹಿತನ ಮೊಬೈಲ್ ಅನ್ನು ಪಡೆದುಕೊಂಡಿದ್ದ. ಅಲ್ಲಿಂದ ಇನ್ನೊಬ್ಬ ಸ್ನೇಹಿತ ದೀಪಕ್ ಮೆಹ್ತಾ ಮನೆಗೆ ತೆರಳಿ ಆತನ ಸ್ಕೂಟರ್ ಪಡೆದು ಸುಮಾರು ೮.೧೫ರ ಸುಮಾರಿಗೆ ವೈನ್ ಶಾಪ್‌ಗೆ ತೆರಳಿ ಬಿಯರ್ ಖರೀದಿಸಿದ್ದ. ಆದರೆ, ಅಲ್ಲಿ ಸ್ಕೂಟರ್ ಸ್ಟಾರ್ಟ್ ಆಗಿರಲಿಲ್ಲ. ಕಳೆದ ೧೫ ದಿನಗಳ ಹಿಂದೆ ಬೈಕ್‌ನಿಂದ ಬಿದ್ದು ಕಾಲಿಗೆ ಪೆಟ್ಟಾಗಿದ್ದರಿಂದ ಕಿಕ್ ಮಾಡಲು ಪರೇಶ್ ಮೇಸ್ತಾಗೆ ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈನ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಇನ್ನೊಬ್ಬ ಸ್ನೇಹಿತ ಶರತ್ ಮೇಸ್ತಾನನ್ನು ಕರೆದು ಸ್ಟಾರ್ಟ್ ಮಾಡಿಕೊಡಲು ಕೋರಿದ್ದ. ಆತ ಸ್ಟಾರ್ಟ್ ಮಾಡಿಕೊಟ್ಟಿದ್ದಲ್ಲದೆ, ಬ್ಯಾಟರಿ ಸಮಸ್ಯೆ ಇದೆ ಎಂದೂ ತಿಳಿಸಿದ್ದ. ಅದಾಗಲೇ ಅಲ್ಲಿನ ಗುಡ್‌ಲಕ್ ಸರ್ಕಲ್ ಬಳಿ ಕೋಮು ಗಲಭೆ ಆಗುತ್ತಿದ್ದ ಬಗ್ಗೆ ಪರೇಶ್ ಮೇಸ್ತಾನಿಗೆ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಬೈಕ್ ಹತ್ತಿದ ಪರೇಶ್ ಅಲ್ಲಿಂದ ಸೀದಾ ಸೇಂಟ್ ಥಾಮಸ್ ಶಾಲೆಯ ಮೈದಾನಕ್ಕೆ ತೆರಳಿ ಅಲ್ಲಿದ್ದ ಸ್ನೇಹಿತ ಅಶೋಕ್ ಮೇಸ್ತಾನಿಗೆ ಸ್ಕೂಟರ್ ಕೀ ಕೊಟ್ಟು, “ಗುಡ್‌ಲಕ್ ಸರ್ಕಲ್‌ನಲ್ಲಿ ಹಿಂದು-ಮುಸ್ಲಿಂ ಸಮುದಾಯದ ಕೋಮುಗಲಭೆ ಆಗುತ್ತಿದೆ” ಎಂಬ ವಿಷಯವನ್ನು ತಿಳಿಸಿ ತೆರಳಿದ್ದ. ಅದಾದ ಬಳಿಕ ಆತ ಎಲ್ಲೂ ಕಾಣಿಸಿಕೊಂಡಿರಲಿಲ್ಲ ಎಂಬ ಅಂಶವನ್ನೂ ಸಿಬಿಐ ಉಲ್ಲೇಖಿಸಿತ್ತು.
ಇದನ್ನೂ ಓದಿ: ನಾನೇ ಪೂಜೆ ಮಾಡುತ್ತೇನೆಂದ ಅರ್ಚಕನಿಗೆ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು; ಏನಿದು ಬಸವಣ್ಣ ದೇವಸ್ಥಾನ ವಿವಾದ?
ಆದರೆ, ಡಿಸೆಂಬರ್ ೭ರಂದು ತನ್ನ ಮಗ ಕಾಣೆಯಾಗಿದ್ದಾನೆ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣ ತನಿಖೆ ಕೈಗೊಂಡ ಪೊಲೀಸರಿಗೆ ಡಿ.೮ರಂದು ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾನ ಶವ ಪತ್ತೆಯಾಗಿತ್ತು.
ಅಯ್ಯಪ್ಪ ಮಾಲೆ ಧರಿಸುವುದಾಗಿ ಹೇಳಿದ್ದ
ಈ ಮಧ್ಯೆ ಸ್ನೇಹಿತರ ಒಡನಾಟವನ್ನು ಹೆಚ್ಚಿಸಿಕೊಂಡಿದ್ದ ಪರೇಶ್ ಮೇಸ್ತಾ ಅಯ್ಯಪ್ಪ ದೇವರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸುವುದಾಗಿ ಮನೆಯಲ್ಲಿ ಹೇಳಿದ್ದಲ್ಲದೆ, ಮಾಲೆ ಧಾರಣೆಗೆ ಶಬರಿಮಲೆಗೆ ಹೋಗಿಬುರುವುದಾಗಿ ತಂದೆ ಬಳಿ ಒಪ್ಪಿಗೆಯನ್ನೂ ಪಡೆದುಕೊಂಡಿದ್ದ ಎಂಬ ಅಂಶವು ತನಿಖೆ ವೇಳೆ ತಿಳಿದು ಬಂದಿದ್ದಾಗಿ ಸಿಬಿಐ ತನ್ನ ವಿಸ್ತೃತ ವರದಿಯಲ್ಲಿ ಉಲ್ಲೇಖ ಮಾಡಿತ್ತು.
ಮೀನು ವ್ಯಾಪಾರ ಮಾಡಿಕೊಂಡಿದ್ದ
೯ನೇ ತರಗತಿ ನಪಾಸಾಗಿದ್ದ ಪರೇಶ್ ಮೇಸ್ತಾ ಶಾಲೆ ಬಿಟ್ಟಿದ್ದ. ಬಳಿಕ ಬೆಂಗಳೂರಿಗೆ ತೆರಳಿ ಸ್ನೇಹಿತ ಆಕಾಶ್ ಮೇಸ್ತಾನಿಗೆ ಬೇಕರಿಯೊಂದರಲ್ಲಿ ಸಹಾಯಕನಾಗಿ ೭-೮ ತಿಂಗಳು ಕೆಲಸ ಮಾಡಿದ್ದ. ಆದರೆ, ಸಂಬಳ ತೀರಾ ಕಡಿಮೆ ಎಂದು ಹೇಳಿ ಅಲ್ಲಿಂದ ವಾಪಸ್ ಹೊನ್ನಾವರಕ್ಕೆ ತೆರಳಿದ್ದ. ಹೊನ್ನಾವರದಲ್ಲಿ ಕಾಸರಗೋಡಿನ ಬೋಟ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಮೀನಿನ ವ್ಯಾಪಾರದ ಲೆಕ್ಕಾಚಾರ ಮಾಡಿಕೊಂಡಿದ್ದ. ಹಲವು ವರ್ಷಗಳ ನಂತರ ತಾನೇ ಮೀನು ವ್ಯಾಪಾರವನ್ನೂ ಶುರು ಮಾಡಿದ್ದ. ಹೀಗಾಗಿ ತಾನೇ ದುಡಿಮೆಗಿಳಿದ ಬಳಿಕ ಕೆಲವು ಸಮಯ ಮನೆಗೆ ಬರುತ್ತಿರಲಿಲ್ಲ. ಅಲ್ಲದೆ, ಆಗಾಗ ಮದ್ಯ ಸೇವಿಸಿಯೂ ಬರುತ್ತಿದ್ದ. ಹೆಚ್ಚಾಗಿ ಸ್ನೇಹಿತರ ಸಂಗಡ ಇರುತ್ತಿದ್ದ ಎಂದು ಸಿಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಎಲ್ಲ ವಿಚಾರಗಳನ್ನು ಪರೇಶ್ ಮೇಸ್ತಾನ ಸ್ನೇಹಿತರು, ಒಡನಾಡಿಗಳು ಸೇರಿದಂತೆ ಇನ್ನಿತರ ಸಂಗತಿಗಳನ್ನೊಳಗೊಂಡು ವಿಚಾರಣೆ ನಡೆಸಿದ್ದ ಸಿಬಿಐ ತಂಡವು ಮಾಹಿತಿಯನ್ನು ಕಲೆಹಾಕಿತ್ತು. ಈ ಎಲ್ಲ ಅಂಶವನ್ನೂ ಉಲ್ಲೇಖಿಸಿ ಪರೇಶ್ ಮೇಸ್ತಾನ ಸಾವು ಕೊಲೆಯಲ್ಲಿ, ಆಕಸ್ಮಿಕ ಎಂದು ವರದಿ ಮಾಡಿತ್ತು.
ಇದನ್ನೂ ಓದಿ: Karnataka Election 2023: ಸಚಿವ ಅಶ್ವತ್ಥನಾರಾಯಣ ವರ್ಸಸ್ ಶಾಸಕಿ ಅನಿತಾ ಕುಮಾರಸ್ವಾಮಿ; ಏನಿದು ಅಭಿವೃದ್ಧಿ ಜಟಾಪಟಿ?
ಸಿಬಿಐ ಮರು ತನಿಖೆಗೆ ಸ್ಪೀಕರ್ ಕಾಗೇರಿ ಒತ್ತಾಯ
ಪರೇಶ್ ಮೇಸ್ತಾ ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿದ್ದ ಬೆನ್ನಲ್ಲೇ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಪ್ರಕರಣ ಬೇರೆಯೇ ಇದ್ದು, ಸಿಬಿಐ ಮರು ತನಿಖೆ ನಡೆಸಬೇಕು. ಈ ಬಗ್ಗೆ ತಾವು ಈಗಾಗಲೇ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ್ದಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಅನೇಕ ಬಿಜೆಪಿ ಮುಖಂಡರು ಸಿಬಿಐ ವರದಿಯನ್ನು ಅಲ್ಲಗಳೆದಿದ್ದರು. ಆದರೆ, ಕಾಂಗ್ರೆಸ್ ಈ ವರದಿಯನ್ನು ಸ್ವಾಗತ ಮಾಡಿತ್ತು. ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿದೆ ಎಂಬ ಆರೋಪವನ್ನೂ ಮಾಡಿತ್ತು.