Site icon Vistara News

ಬೆಳಗಾವಿಯಲ್ಲಿ ಪಠಾಣ್‌ ಚಿತ್ರ ಪ್ರದರ್ಶನ ವಿರೋಧಿಸಿ ಚಿತ್ರಮಂದಿರಕ್ಕೆ ಮುತ್ತಿಗೆ; 30 ಹಿಂದು ಕಾರ್ಯಕರ್ತರ ವಿರುದ್ಧ ಪ್ರಕರಣ

Pathaan Movie

ಬೆಳಗಾವಿ: ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ (Pathaan Movie) ಪ್ರದರ್ಶಿಸದಂತೆ ಒತ್ತಾಯಿಸಿ, ನಗರದ ಸ್ವರೂಪ-ನರ್ತಕಿ ಚಿತ್ರಮಂದಿರಕ್ಕೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದ್ದು, 30 ಕಾರ್ಯಕರ್ತರ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರಮಂದಿರದ ಮೇಲೆ ದಾಳಿ ನಡೆಸಿ ಪಠಾಣ್ ಚಿತ್ರದ ಬ್ಯಾನರ್ ಹರಿದು ಹಿಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ವಶಕ್ಕೆ ಪಡೆದು 30 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ವರೂಪ್ ಚಿತ್ರಮಂದಿರದ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿತ್ರ ಮಂದಿರದ ಬಳಿ ಸಿಪಿಐ ನೇತೃತ್ವದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿ ಭದ್ರತೆ ಏರ್ಪಡಿಸಲಾಗಿದೆ.

ಚಿತ್ರ ಪ್ರದರ್ಶನ ಹಿಂಪಡೆಯಬೇಕು: ಶಾಸಕ ಅಭಯ್ ಪಾಟೀಲ್ ಮನವಿ

ಪಠಾಣ್ ಚಿತ್ರ ಪ್ರದರ್ಶನ ಮಾಡದಂತೆ ಹಿಂದುಪರ ಸಂಘಟನೆಗಳ ಆಗ್ರಹ ವಿಚಾರವಾಗಿ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಪ್ರತಿಕ್ರಿಯಿಸಿ, ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ವಯಂಪ್ರೇರಿತವಾಗಿ ಚಿತ್ರ ಪ್ರದರ್ಶನವನ್ನು ಚಿತ್ರಮಂದಿರದ ಮಾಲೀಕರು ಹಾಗೂ ಚಿತ್ರ ವಿತರಕರು ರದ್ದು ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಈ ರೀತಿಯ ಚಿತ್ರ ಪ್ರದರ್ಶನ ಮೂಲಕ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಆಗುವ ಸ್ಥಿತಿ ಕಂಡುಬಂದಲ್ಲಿ ಚಿತ್ರ ಪ್ರದರ್ಶನ ಹಿಂಪಡೆಯಬೇಕು. ಪಠಾಣ್ ಚಿತ್ರ ಪ್ರದರ್ಶನಕ್ಕೆ ವಿರೋಧಿಸಿ ಪ್ರತಿಭಟನೆ ಪ್ರಾರಂಭವಾಗಿದೆ. ಬಹಳಷ್ಟು ಹೆಣ್ಣುಮಕ್ಕಳು ಸಹ ಪಠಾಣ್ ಚಲನಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಚಿತ್ರ ವಿತರಕರೇ ಚಿತ್ರ ಪ್ರದರ್ಶನವನ್ನು ರದ್ದು ಮಾಡಬೇಕು ಎಂದು ಹೇಳಿದ್ದಾರೆ.

ವಿಶ್ವದಾದ್ಯಂತ ಶಾರುಖ್ ಖಾನ್‌‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಜನವರಿ 25ರಂದು ಬಿಡುಗಡೆಯಾಗಲಿದೆ. ಚಿತ್ರದ ಬೇಷರಂ ರಂಗ್‌ ಹಾಡಿನಲ್ಲಿ ನಟಿಗೆ ಕೇಸರಿ ಬಣ್ಣದ ಬಟ್ಟೆ ಹಾಕಿಸಿ, ನಾಚಿಕೆಯಿಲ್ಲದ ಬಣ್ಣ ಎಂಬರ್ಥದಲ್ಲಿ ಹಾಡನ್ನು ಚಿತ್ರೀಕರಿಸಿ ಹಿಂದು ಧರ್ಮವನ್ನು ಅವಮಾನಿಸಲಾಗಿದೆ ಎಂದು ಈ ಹಿಂದೆ ದೇಶದಾದ್ಯಂತ ಹಿಂದುಪರ ಸಂಘಟನೆಗಳು ಆರೋಪಿಸಿ, ಚಿತ್ರದ ವಿರುದ್ಧ ಬಾಯ್ಕಾಟ್‌ ಅಭಿಯಾನ ಮಾಡುವುದಾಗಿ ಎಚ್ಚರಿಕೆ ನೀಡಿದ್ದವು.

ಶಿವಾಜಿ ಭಾವಚಿತ್ರ ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಒತ್ತಾಯಿಸಿದ್ದಾರೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವ ಅವರು, ಶಿವಾಜಿ ಮಹಾರಾಜರ ಭಾವಚಿತ್ರ ವಿರೂಪಗೊಳಿಸಿ ವಿಕೃತಿ ಮೆರೆದ ಕಿಡಿಗೇಡಿಗಳ ಬಂಧಿಸಬೇಕು. ಮತಾಂಧರಿಗೆ ಬುದ್ಧಿ ಕಲಿಸಬೇಕೆಂದರೆ ಉತ್ತರ ಪ್ರದೇಶ ಮಾದರಿಯಲ್ಲಿ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಬೇಕು. ಮಹಾಪುರುಷರು, ದೇವ ದೇವತೆಗಳ ಚಿತ್ರಗಳನ್ನು ವಿರೂಪಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version