ಬೆಂಗಳೂರು: ಅದು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಆಗಿತ್ತು. ಆದರೆ ಆ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡ ದೋಷದಿಂದ ಅದೆಷ್ಟೋ ಸಮಯದಿಂದ ಭಾರೀ ವಾಹನಗಳ ಸಂಚಾರ ಸ್ತಬ್ಧವಾಗಿಬಿಟ್ಟಿದೆ. ಅಲ್ಲದೇ ಫ್ಲೈಓವರ್ ಸಮಸ್ಯೆಯಿಂದ ಟ್ರಾಫಿಕ್ ಕಿರಿಕಿರಿ ಕೂಡ ಜನರನ್ನು ಬಾಧಿಸುತ್ತಿದೆ. ಪೀಣ್ಯ ಮೇಲ್ಸೇತುವೆಗೆ (Peenya Flyover) ಮರುಜೀವ ನೀಡುವ ಕಾರ್ಯ ಭಾರದಿಂದ ಸಾಗುತ್ತಿದೆ. ಅಂದುಕೊಂಡಂತೆ ಎಲ್ಲ ಕೆಲಸ ಮುಗಿದಿದ್ದರೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಸಿಗಬೇಕಿತ್ತು. ಇದೀಗ ಇವೆಲ್ಲವೂ ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ಡ್ ಆಗಿದೆ.
2021ರ ಡಿಸೆಂಬರ್‌ನಲ್ಲಿ ಪೀಣ್ಯ ಫ್ಲೈಓವರ್‌ನ 102-103ರ ಪಿಲ್ಲರ್ ನಡುವಿನ 5 ಕೇಬಲ್ ಬಾಗಿದ್ದರಿಂದ ಸಮಸ್ಯೆ ಆಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಎಲ್ಲ ಬಗೆಯ ವಾಹನಗಳನ್ನು ನಿಷೇಧಿಸಿತ್ತು. ಬಳಿಕ 2022ರ ಫೆಬ್ರವರಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ, ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿತ್ತು.
ಇದನ್ನೂ ಓದಿ: Murder case : ಮತ್ತೊಬ್ಬಳ ಮೋಹಿಸಿದ; ಉಸಿರುಗಟ್ಟಿಸಿ 2ನೇ ಹೆಂಡ್ತಿಯನ್ನು ಕೊಂದ!
2023ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಸಜ್ಜಾಗುವ ಲಕ್ಷಣಗಳು ಗೋಚರವಾಗಿತ್ತು. ಇದೀಗ ಅದು ಮುಂದಿನ ವರ್ಷ ಏಪ್ರಿಲ್‌ಗೆ ಮುಂದೆ ಹೋಗಿದೆ. ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಪೀಣ್ಯ ಮೇಲ್ಸೇತುವೆ ಮೇಲೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಭಾರೀ ವಾಹನಗಳ ಸಂಚಾರ ಭಾಗ್ಯ ಇನ್ನೂ ಸಿಕ್ಕಿಲ್ಲ. ಲೋಡ್ ಟೆಸ್ಟಿಂಗ್, ಕೇಬಲ್ ಅಳವಡಿಕೆ ಕಾರ್ಯ ಎಲ್ಲವೂ 2024ರ ಏಪ್ರಿಲ್ ಮುಗಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಫ್ಲೈಒವರ್ ಮೇಲೆ ಭಾರೀ ವಾಹನಗಳ ಓಡಾಟ ಸದ್ಯಕ್ಕಿಲ್ಲ.
ಸುಮಾರು 18 ಜಿಲ್ಲೆಗಳು ಸೇರಿ ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲ್ಸೇತುವೆಯ ಕೇಬಲ್ ಅಳವಡಿಕೆ ಕೆಲಸ ಮುಂದುವರಿದಿದೆ. ಮಧ್ಯಪ್ರದೇಶದ ಭೂಪಾಲ್‌ನಿಂದ 25 ಟನ್ ಕೇಬಲ್‌ಗಳು ಬಂದಿದ್ದು, ಕೆಮಿಕಲ್ ಅನಾಲಿಸಿಸ್ ಬಳಿಕ ಕೇಬಲ್ ಅಳವಡಿಕೆ ಮಾಡಲು ಮಾಡಲಾಗುತ್ತದೆ. ಕೇಬಲ್ ಅಳವಡಿಕೆ ಮಾಡುವ ಮುನ್ನ IISC ತಜ್ಞರು ಮೂರು ಭಾರಿ ಲೋಡ್ ಟೆಸ್ಟ್ ನಡೆಸಿದ್ದಾರೆ. ಲೋಡ್ ಟೆಸ್ಟ್ ಬಳಿಕ 120 ಪಿಲ್ಲರ್‌ಗಳ ನಡುವೆ 240 ಹೊಸ ಕೇಬಲ್ ಅಳವಡಿಕೆ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇನ್ನೂ ಲೋಡ್ ಟೆಸ್ಟಿಂಗ್ ಬಳಿಕ ಮತ್ತೆ ಎರಡನೇ ಸುತ್ತಿನ ಟೆಸ್ಟ್ ನಡೆಯಲಿದ್ದು, ಅದಾದ ನಂತರ 1,200 ಕೇಬಲ್‌ಗಳ ಅಳವಡಿಕೆ ಮಾಡಲಾಗುತ್ತದೆ.
ಗುತ್ತಿಗೆದಾರರಿಗೆ ಈಗಾಗಲೇ ಅಧಿಕಾರಿಗಳು 2024ರ ಮೇ ಗಡುವು ನೀಡಿದ್ದಾರೆ. ಆದರೆ ಬಹುತೇಕ ಏಪ್ರಿಲ್‌ನೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲ ಗಾತ್ರದ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಬೆಂಗಳೂರು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಕೆ.ಬಿ ಜಯಕುಮಾರ್ ಮಾಹಿತಿ ನೀಡಿದ್ದಾರೆ. ಟ್ರಾಫಿಕ್ ಕಿರಿಕಿರಿ, ವಾಹನದಟ್ಟಣೆಯಿಂದ ಕಂಗೆಟ್ಟಿರುವ ಈ ಮಾರ್ಗದ ವಾಹನ ಸವಾರರು, ಫ್ಲೈಓವರ್ ಯಾವಾಗ ಸರಿಯಾಗುತ್ತದೆ ಎಂದು ಕಾದುಕುಳಿತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ