ದಾವಣಗೆರೆ: ದಲಿತರು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಅಸ್ಪೃಶ್ಯತೆ ನಿವಾರಣೆಯ ಮಹಾ ಆಂದೋಲನ ಆರಂಭಿಸಿದ್ದ ಪೇಜಾವರ ಮಠದ (Pejavara sri) ಬೃಂದಾವನಸ್ಥ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಹಾ ಮೇಲ್ಪಂಕ್ತಿಯನ್ನು ಈಗಿನ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೂಡಾ ಮುಂದುವರಿಸಿದ್ದಾರೆ. ಅಸ್ಪೃಶ್ಯತೆ ನಿವಾರಣೆಯ ನಿಟ್ಟಿನಲ್ಲಿ ಈ ಆಂದೋಲನ ದೊಡ್ಡ ಕ್ರಾಂತಿಯನ್ನೇ ಮಾಡಿತ್ತು. ದಲಿತರಿಗೆ ದೇವಸ್ಥಾನ ಪ್ರವೇಶ ಒದಗಿಸುವಲ್ಲೂ ಶ್ರೀಗಳು ಮುಂಚೂಣಿಯ ಪಾತ್ರ ವಹಿಸಿದ್ದರು. ಅದಾದ ಬಳಿಕ ದೇವಾಲಯಗಳಲ್ಲಿ ಮುಕ್ತ ಪ್ರವೇಶ ಒದಗಿತ್ತು.
ಆಗ ಆರಂಭಿಸಿದ ದಲಿತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬುವುದು, ಪೂಜೆಯಲ್ಲಿ ಪಾಲ್ಗೊಳ್ಳುವ ಪರಂಪರೆಯನ್ನು ಇದೀಗ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೂ ಮುಂದುವರಿಸಿದ್ದಾರೆ. ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜತೆಗೇ ಬೆಳೆದ ವಿಶ್ವಪ್ರಸನ್ನ ತೀರ್ಥರು ಹಿಂದಿನಿಂದಲೂ ಅಸ್ಪೃಶ್ಯತೆ ನಿವಾರಣೆ ವಿಚಾರದಲ್ಲಿ ಹಿಂದಿನಿಂದಲೂ ಗುರುಗಳ ಬೆನ್ನಿಗೆ ನಿಂತಿದ್ದರು.
ದಾವಣಗೆರೆಯಲ್ಲಿ ಶ್ರೀಗಳು
ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಮಂಗಳವಾರ ದಾವಣಗೆರೆಯ ಶಕ್ತಿ ನಗರದಲ್ಲಿರುವ ದಲಿತ ಮುಖಂಡ ಲಿಂಗರಾಜ್ ಮನೆಗೆ ಆಗಮಿಸಿ ಪಾದಪೂಜೆ ಸ್ವೀಕರಿಸಿದರು. ಅವರ ಜತೆ ಅದಿಜಾಂಭವ ಪೀಠದ ಷಡಕ್ಷರಮುನಿ ಸ್ವಾಮೀಜಿ ಕೂಡಾ ಉಪಸ್ಥಿತರಿದ್ದರು.
ಪಾದಪೂಜೆಯ ನಂತರ ಆಶೀರ್ವಚನ ನೀಡಿದ ಪೇಜಾವರ ಶ್ರೀಗಳು ಅಸ್ಪೃಶ್ಯತೆ ನಿವಾರಣೆಯ ಅಗತ್ಯತೆ ಮತ್ತು ಸಮಾಜ ಒಂದಾಗಿ ನಿಲ್ಲಬೇಕಾದ ಬಗೆಯನ್ನು ವಿವರಿಸಿದರು. ಹಿಂದು ಸಮಾಜ ಸುಧಾರಣೆಯ ದಾರಿಯಲ್ಲಿ ಬಹುದೂರ ಸಾಗಿ ಬಂದಿರುವುದನ್ನು ಶ್ಲಾಘಿಸಿದರು. ಆ ಪ್ರದೇಶದ ನಿವಾಸಿಗಳು ಶ್ರೀಗಳಿಂದ ಆಶೀರ್ವಾದ, ಪ್ರಸಾದ ಸ್ವೀಕರಿಸಿದರು.
ಮಂದಿರದ ಕನಸು ಈಡೇರುತ್ತಿದೆ
ಇದೇ ವೇಳೆ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ವಿವರ ನೀಡಿದ ಶ್ರೀಗಳು, ʻʻರಾಮ ಮಂದಿರದ ಕನಸು ಈಡೇರುತ್ತಿದೆ. ಅದೊಂದೇ ಅಲ್ಲ ರಾಮ ರಾಜ್ಯದ ಕನಸು ಕೂಡ ಇದೆ. ನಾವೆಲ್ಲರೂ ಸೇರಿ ರಾಮರಾಜ್ಯ ಸ್ಥಾಪನೆಗೆ ಪ್ರಯತ್ನ ಮಾಡಬೇಕು, ಪ್ರತಿಯೊಬ್ಬರೂ ರಾಮನ ಅದರ್ಶ ಅಳವಡಿಸಿಕೊಳ್ಳಬೇಕು ಎಂದರು. ರಾಮ ರಾಜ್ಯದಲ್ಲಿ ಎಲ್ಲರೂ ಸುಖಃ ಸಂತೋಷದಿಂದ ಇದ್ದರು ಎಂದು ನೆನಪಿಸಿದ ಅವರು ಈ ದೇಶದಲ್ಲಿ ಅಂತಹುದೇ ಪರಿಸ್ಥಿತಿ ನಿರ್ಮಾಣವಾಗಲಿ ಎಂದು ಆಶಿಸಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಯಕ್ಷಗಾನ, ಕಂಬಳ, ಜಾತ್ರೆಗೆ ಹಿಂದುಗಳ ಸೋಗಿನಲ್ಲಿ ಉಗ್ರರು ಬಂದಾರು, ಹುಷಾರು: ಪೇಜಾವರ ಶ್ರೀ