Site icon Vistara News

ಮೊಹರಂನಲ್ಲಿ ಮೆರೆದ ಅಪ್ಪು ಪ್ರೀತಿ: ಮೆರವಣಿಗೆಯಲ್ಲಿ ಪುನೀತ್ ಫೋಟೊ ಹಿಡಿದು ಕುಣಿದ ಅಭಿಮಾನಿಗಳು

puneet

ಬೆಳಗಾವಿ/ಕೊಪ್ಪಳ/ಬಾಗಲಕೋಟೆ: ರಾಜ್ಯದಲ್ಲಿ ಮಂಗಳವಾರ ಮೊಹರಂ ಹಬ್ಬವನ್ನು ಭಕ್ತಿ ಮತ್ತು ಶ್ರದ್ಧೆಗಳಿಂದ ಆಚರಿಸಲಾಯಿತು. ಹಲವು ಜಿಲ್ಲೆಗಳಲ್ಲಿ ಇದನ್ನೊಂದು ಭಾವೈಕ್ಯತೆಯ ಹಬ್ಬವಾಗಿ ಎಲ್ಲರೂ ಸೇರಿ ಸಂಭ್ರಮಿಸಿದರು. ಮುಸ್ಲಿಮರೇ ಇಲ್ಲದ ಊರುಗಳಲ್ಲೂ ಹಿಂದುಗಳೇ ಈ ಹಬ್ಬದ ಸಂಪ್ರದಾಯಗಳನ್ನು ನೆರವೇರಿಸಿದರು. ಈ ನಡುವೆ ಗಮನ ಸೆಳೆದ ಮತ್ತೊಂದು ಅಂಶವೆಂದರೆ, ರಾಜ್ಯದ ಹಲವು ಕಡೆಗಳಲ್ಲಿ ಮೊಹರಂನಲ್ಲಿ ಮೆರೆದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಮೇಲಿನ ಅಪ್ಪಟ ಪ್ರೀತಿ ಅಭಿಮಾನ.

ಪುಟ್ಟ ಮಕ್ಕಳು ಕೂಡಾ ಇಷ್ಟ ಪಡುತ್ತಿದ್ದ ನಟ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನು ಅಗಲಿ ಒಂದು ವರ್ಷವಾಗುತ್ತಾ ಬಂದರೂ ಈಗಲೂ ನಿತ್ಯ ನೆನಪಾಗಿದ್ದಾರೆ. ಹೀಗಾಗಿಯೇ ಮೊಹರಂ ದಿನವೂ ಅವರ ಫೋಟೊಗಳನ್ನು ಎತ್ತಿ ಕುಣಿದಾಡಿದ್ದು.

ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿ ಹಿಂದು- ಮುಸ್ಲಿಂ ಎಂದು ಬೇಧ ಭಾವ ಮಾಡದೆ ಹಬ್ಬ ಆಚರಿಸಿದರು. ಈ ವೇಳೆ, ಶಿವ ಪಾರ್ವತಿ, ರಾಮ ಸೀತಾ, ಲಕ್ಷ್ಮಣ, ಹನುಮಂತ, ರಾಕ್ಷಸ ಸೇರಿದಂತೆ ಇತರೆ ದೇವರುಗಳ ವೇಷ ಧರಿಸಿ ನೃತ್ಯ ಮಾಡುತ್ತಿದ್ದರು. ಈ ವೇಳೆ ವೇಳೆ ಶಿವನ ಪಾತ್ರದಾರಿ ಯುವಕನೊಬ್ಬ ಪುನೀತ್‌ ರಾಜಕುಮಾರ್‌ ಅವರ ಫೋಟೊ ಹಿಡಿದು ಅವರ ಜೊತೆಗೆ ಹೆಜ್ಜೆ ಹಾಕಿದ. ಅನಂತರ ಎಲ್ಲ ಯುವಕರು ಹಾಗೂ ಗ್ರಾಮಸ್ಥರು ಸೇರಿ ಪುನೀತ ಅವರ ಪೊಟೊ ಹಿಡಿದು ಮೆರವಣಿಗೆ ಮಾಡಿ ಮೋಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.

ಫೋಟೊ ಹಿಡಿದು ಬೆಂಕಿ ತುಳಿದ ಯುವಕ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದೊಂಡಬಳಿ ಎಂಬಲ್ಲಿ ಖತಲ್ ರಾತ್ರಿ ವೇಳೆ ಅಲಾಯಿ ಕುಣಿ ಬೆಂಕಿ ತುಳಿದ ಯುವಕ ಕೈಯಲ್ಲಿ ಪುನೀತ್‌ ಭಾವಚಿತ್ರವನ್ನು ಹಿಡಿದುಕೊಂಡಿದ್ದದ್ದು ಗಮನ ಸೆಳೆಯಿತು. ಗೆಜ್ಜೆ ಕುಣಿತ ನೃತ್ಯದಲ್ಲೂ ಪುನೀತ್ ಭಾವಚಿತ್ರ ಹಿಡಿದ ಕೆಲ ಯುವಕರು ಕಾಣಿಸಿಕೊಂಡರು.

ಬಾಗಲಕೋಟೆಯಲ್ಲೂ..
ಬಾಗಲಕೋಟೆ ನಗರದಲ್ಲಿ ನಡೆದ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಹುಲಿ ವೇಷಧಾರಿಗಳು ಕೈಯಲ್ಲಿ ಪುನೀತ್‌ ಭಾವಚಿತ್ರ ಕೈಯಲ್ಲಿ ಹಿಡಿದು ಕುಣಿದಾಡಿದರು.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಂತೂ ಮೊಹರಂ ಹಬ್ಬದ ಅಲಾಯಿ ದೇವರ ಜೊತೆಗೆ ಅಪ್ಪು ಫೋಟೊ ಮೆರವಣಿಗೆ ಮಾಡಿದರು. ಅಷ್ಟರ ಮಟ್ಟಿಗೆ ಅಭಿಮಾನ ಮೆರೆದರು.

ಇದನ್ನೂ ಓದಿ| Puneet Rajkumar | ಪುನೀತ್ ‌ಪೋಟೋ ಹಿಡಿದು ನಿಗಿ ನಿಗಿ ಬೆಂಕಿ ತುಳಿದ ಯುವಕ!

Exit mobile version